ಸ್ಟೇಟಸ್ ಕತೆಗಳು (ಭಾಗ ೧೩೦೯) - ಗೃಹ ಪ್ರವೇಶ

ಸ್ಟೇಟಸ್ ಕತೆಗಳು (ಭಾಗ ೧೩೦೯) - ಗೃಹ ಪ್ರವೇಶ

ನೆಮ್ಮದಿಯ ಗೂಡೊಳಗೆ ಹಾಗೆ ನಿಂತು ಸುಮ್ಮನೆ ಸಾಗಿ ಬಂದ ದಾರಿಯನ್ನ ನೋಡುತ್ತಿದ್ದಾನೆ. 14 ವರ್ಷದ ವನವಾಸದ ಬದುಕು ಮುಗಿದು ಸ್ವಂತ ಮನೆಯಲ್ಲಿ‌ ಪಟ್ಟಾಭಿಷಿಕ್ತನಾಗುವ ಘಳಿಗೆ. ಇಷ್ಟು ದಿನಗಳ ಕಾಲ ತನ್ನದಲ್ಲದೇ ತನ್ನದೇ ಅಂದುಕೊಂಡಂತ ಬಾಡಿಗೆ‌ ಮನೆಗಳ ಯಾತ್ರೆಯನ್ನ ನಡೆಸಿ ಯತ್ರೆಗಿಂದು ಮುಕ್ತಾಯದ ಹಂತ. ಒಳ್ಳೆಯ ದಿನಕ್ಕಾಗಿ ಕಾದು ಇಂದು ಹಾಲುಕ್ಕಿಸಿ ಸಂಭ್ರಮ ಪಟ್ಟಿದ್ದಾನೆ. ಸತತ ಕಾಯುವಿಕೆಗೆ ಫಲ ದೊರೆಯುತ್ತದೆ. ಯಾರದೋ ನೆಲದಲ್ಲಿ ನಡೆಯುತ್ತಿದ್ದವ ತಾನುಳಿಯುವ ನೆಲವ ಖರೀದಿಸಿ ಗಟ್ಟಿಯಾಗಿದ್ದಾನೆ. ನೋಡುಗರಿಗೆ ಇಷ್ಟು ವರ್ಷ ಯಾಕಾಯ್ತು ಅನ್ನೋ ಪ್ರಶ್ನೆ. ಒಳಗಿದ್ದು ವನವಾಸ ಅನುಭವಿಸಿದವನಿಗೆ ಮಾತ್ರ ಅದರ ಒಳಗುಟ್ಟು ತಿಳಿದಿದೆ. ಕನಸೊಂದು ನನಸಾಗಿದೆ. ಇಲ್ಲಿಗೆ ನಿಂತಿಲ್ಲ ಮುಂದೆ ಸಾಗುವುದಕ್ಕಿದೆ. ಇಂದು ತನ್ನ ಜೀವನದ ಜೊತೆಗೆ ನಿಂತ ಎಲ್ಲರನ್ನ ಕಣ್ತುಂಬಿಸಿಕೊಂಡು ಹಾರೈಕೆ ಸ್ವೀಕರಿಸಿದ್ದಾನೆ. ಇಷ್ಟು ವರ್ಷದ ಸಂಪಾದನೆಯ ಮೌಲ್ಯ ತಿಳಿದಿದ್ದಾನೆ. ಇಷ್ಟು ದಿನದವರೆಗೆ ಮನೆಯ ವಿಳಾಸ ನೀಡಲು ಹಿಂಜರಿಯುತ್ತಿದ್ದವ ಇಂದು ಎಲ್ಲರನ್ನು ಮನೆಗೆ ಅಹ್ವಾನಿಸಿದ್ದಾನೆ. ಅವನ‌ ಕಣ್ಣಂಚಿನ ಹನಿ, ಮುಖದ ತುಂಬೆಲ್ಲಾ ಹರಡಿರುವ ನಗು ಎಲ್ಲವೂ ಕತೆ ಹೇಳುತ್ತಿದೆ. ನೀವೊಮ್ಮೆ ಸಂಭ್ರಮ ನೋಡಬೇಕಿತ್ತು. ಸತತ ಕಾಯುವಿಕೆಯ ಕನಸು ನನಸಾಗಿ ಕಣ್ತುಂಬಿಕೊಂಡ ಕ್ಷಣವನ್ನ ನೋಡಬೇಕಿತ್ತು....

.-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ