ಸ್ಟೇಟಸ್ ಕತೆಗಳು (ಭಾಗ ೧೩೦) - ಏನು ಫಲ?
"ಮಾರ್ಗ ಬದಿಯಲ್ಲಿ ಸಾಲು ಕಂಬಗಳನ್ನು ಊರಿ ಪತಾಕೆಗಳನ್ನು ಕಟ್ಟಿದ್ದಾರೆ. ಸೂರ್ಯನಿಳಿದಾಗ ನೀವೊಮ್ಮೆ ಹಾದು ಹೋಗಬೇಕು. ಇಲ್ಲಿ ಬೆಳಕಿನ ಚಿತ್ತಾರ ಮಿನುಗುತ್ತದೆ. ಬಣ್ಣದ ಬೆಳಕು ಓಡುತ್ತದೆ, ಹಾರುತ್ತದೆ, ಮಾಯವಾಗುತ್ತಿದೆ. ಇದನ್ನನುಸರಿಸಿ ಒಳ ನಡೆದಾಗಲೇ ಸಂಭ್ರಮದ ಭಕ್ತಿಯೊಂದು ಎದುರಾಗುತ್ತದೆ. ಥಾಸೆ ಡೋಲುಗಳ ವಾದನ ಆರಂಭವಾಗಿ ಗಗ್ಗರ ಸ್ವರ ಸೇರಿಸುತ್ತಿದೆ. ಆ ಭಕ್ತಿಯ ಪರಾಕಾಷ್ಠೆಯಲ್ಲಿ ನರ್ತನ ಸೇವೆಗೆ ಕೈಮುಗಿದು ನಿಂತ ಜನಸಮೂಹ " ನಾನಿಷ್ಟು ವಿವರಿಸಿದ್ದು ಕೆಲವು ಕಾಲಗಳ ಹಿಂದಿನ ಕಥೆ.
ಅದೇ ಸ್ಥಳದಲ್ಲಿ ಪ್ರಸ್ತುತ ಆಚರಣೆ ವಿಭಿನ್ನವಾಗಿದೆ ! ವಿಧಿವಿಧಾನಗಳು ಬದಲಾಗದಿದ್ದರೂ ದೈವ ಆವಾಹಿಸಿಕೊಂಡು ಅಬ್ಬರದ ಕುಣಿತವಾಗುತ್ತಿರೋದನ್ನ ಕಣ್ಣಲ್ಲಿ ತುಂಬಿ ಮನದೊಳಗೆ ನೆನಪಿನ ಬುತ್ತಿಯೊಳಗೆ ಭದ್ರಪಡಿಸುವುದ ಬಿಟ್ಟು ನಾಲ್ಕು ಇಂಚಿನ ಮೊಬೈಲ್ ತೆಗೆದು ಚಿತ್ರೀಕರಿಸುತ್ತಿದ್ದಾರೆ. ಇದ್ಯಾವ ಸೀಮೆಯ ಭಕ್ತಿಯೋ ಗೊತ್ತಾಗುತ್ತಿಲ್ಲ. ಭಕ್ತಿ ಮಾರಾಟಕ್ಕೆ ಸಲ್ಲ. ಪ್ರದರ್ಶನವಲ್ಲ. ನನ್ನೊಳಗಿನ ದೀಪವ ಬೆಳಗಿಸುವ ಹಣತೆ. ನನ್ನೊಳಗಿನ ಸತ್ಯದ ಚೇತನವನ್ನ ನಾನೇ ಆರಿಸುವುದು ಎಷ್ಟು ಸಮಂಜಸ. ಯಾರಲ್ಲಿ ಹೇಳುವುದು ಅರ್ಥವಾಗುತ್ತಿಲ್ಲ, ಸುಮ್ಮನೆ ನನ್ನೊಳಗಿನ ಅವನ ಪ್ರಶ್ನೆಗೆ ನಾನೇ ಸಮಾಧಾನಪಡಿಸಿ ಸುಮ್ಮನಾಗಿಸುತ್ತಿದ್ದೇನೆ. ನಾ ಸರಿಯಿದ್ದರೆ ಸಾಕಲ್ವ? ಭಕ್ತಿಯ ನಡುವೆ ಆಡಂಬರ ಬಂದಾಗ ಭಕ್ತಿ ಮನೆಬಿಟ್ಟು ಚಲಿಸುತ್ತದ್ದಂತೆ. ಮನವನ್ನೇ ಬಿಟ್ಟು ಚಲಿಸಿದರೆ ಆಚರಣೆಗೆ ಏನು ಫಲ?
-ಧೀರಜ್ ಬೆಳ್ಳಾರೆ
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ