ಸ್ಟೇಟಸ್ ಕತೆಗಳು (ಭಾಗ ೧೩೧೧) - ನರಕದ ಬಾಗಿಲು

ಸ್ಟೇಟಸ್ ಕತೆಗಳು (ಭಾಗ ೧೩೧೧) - ನರಕದ ಬಾಗಿಲು

ಅವನ ಮನೆಯನ್ನು ಕಂಡಾಗ ಎಂಥವರಿಗೂ ವಿಪರೀತ ಗೌರವ. ಅವನ ಮನೆ ಅದೊಂದು ಆಶ್ರಯ ತಾಣ. ಅಲ್ಲಿ ಪುಟ್ಟ ಪುಟ್ಟ ಹಕ್ಕಿಯ ಮರಿಗಳು ಜೀವನ ನಡೆಸುತ್ತಿವೆ, ನಾಯಿಮರಿಗಳಿಗೆ ಆಶ್ರಯ ತಾಣವಾಗಿದೆ, ದೊಡ್ಡದೊಂದು ಗೋಶಾಲೆಯಿದೆ, ಆ ಮನೆಯಲ್ಲಿ ವೃದ್ಧಾಶ್ರಮವಿದೆ, ಅನಾಥಾಶ್ರಮವಿದೆ ಹೀಗೆ ಎಲ್ಲರ ಒಳಿತನ್ನೇ ಬಯಸುವಂತಹ ಮನಸ್ಸು ಅವನದು. ಆತ ಎಲ್ಲರ ಕಷ್ಟಕ್ಕೆ ಮೊದಲು ಸ್ಪಂದಿಸಿ ಮುಂದುವರೆದು ನಿಲ್ತಾನೆ. ಆತನೂ ಒಂದು ದಿನ ಮರಣಿಸಿದ.ಯಮನ ಪುಸ್ತಕದಲ್ಲಿ ಆತನ ಒಳ್ಳೆಯ ಕೆಲಸಗಳನ್ನು ಪಟ್ಟಿ ದೊಡ್ಡದಿದ್ದರೂ ಕೂಡ ಸ್ವರ್ಗದಲ್ಲಿ ಹೆಜ್ಜೆ ಇಡುವ ಅವಕಾಶವೂ ಸಿಗಲಿಲ್ಲ. ನರಕದ ಬಾಗಿಲು ತೆರೆದುಕೊಂಡಿತು. ಯಾಕೆ ಹೀಗೆ ಅನ್ನೋದನ್ನ ಪ್ರಶ್ನೆ ಮಾಡಿದಾಗ ಯಮ ನಕ್ಕು ಉತ್ತರಿಸಿದ ಅವತ್ತು ನೀನು ಮಾಡಿದ ಕೆಲಸಕ್ಕೆ ತಂದೆ ತಾಯಿ ಕಣ್ಣೀರಿಡುತ್ತಾ ಮನೆಯಿಂದ ಹೊರಟವರು ಅನಾಥ ಶವಗಳಾಗಿ ಸತ್ತು ಹೋದರಲ್ಲ. ಆ ಪಾಪದ ಫಲ ನೀನೆಷ್ಟು ಒಳ್ಳೆಯ ಕೆಲಸ ಮಾಡಿದರೂ  ಪುಣ್ಯ ನಿನಗೆ ದೊರಕುವುದಿಲ್ಲ .ನರಕದ ಬಾಗಿಲಿಗೆ ಬಾಗಿಲು ತೆರೆದಿದೆ ಒಳಗೆ ತೆರಳಿ ಬಿಡು... ಅಂತಂದು ಸುಮ್ಮನಾಗಿ ಬಿಟ್ಟ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ