ಸ್ಟೇಟಸ್ ಕತೆಗಳು (ಭಾಗ ೧೩೧೪) - ಬಿ ಪಾಸಿಟಿವ್

ಸ್ಟೇಟಸ್ ಕತೆಗಳು (ಭಾಗ ೧೩೧೪) - ಬಿ ಪಾಸಿಟಿವ್

ರಸ್ತೆಯ ತುಂಬೆಲ್ಲಾ ಹೊಂಡ ಗುಂಡಿಗಳನ್ನು ಕಂಡಾಗ ನಿಮಗೆ ಈ ಸರಕಾರದ ಬೇಜವಾಬ್ದಾರಿತನದ ಬಗ್ಗೆ ಬೇಸರ ಆಗುವುದಿಲ್ಲವೇ,  ಅವರು ಬೇರೆ ಬೇರೆ ಕೆಲಸ ಮಾಡ್ತಾ ಇರ್ತಾರೆ, ಈ ರಸ್ತೆನೂ ಒಂದಲ್ಲ ಒಂದು ದಿನ ಸರಿಯಾಗುತ್ತೆ ನಾವೇ ಒಂದಷ್ಟು ಅನುಸರಿಸಿಕೊಂಡು ಹೋಗಬೇಕು. ಈ ಟ್ರಾಫಿಕ್ ನ ಮಧ್ಯೆ ಸಿಕ್ಕಿದವರೆಲ್ಲ ಗಾಡಿ ನುಗ್ಗಿಸಿ ನಿಮ್ಮ ಗಾಡಿಗೆ ಏನಾದರೂ ತೊಂದರೆಯಾದರೆ ನೀವು ಯಾರಿಗೂ ಬೈಯುವುದಿಲ್ಲವೇ? ಅವರ ಜೊತೆ ಮಾತನಾಡಿ ಸಮಯ ಹಾಳು ಮಾಡಿಕೊಳ್ಳುವುದಕ್ಕಿಂತ ಸರಿದಾರಿ ನೋಡಿಕೊಂಡು ಮುಂದೆ ಹೋಗೋದು ಒಳ್ಳೆಯದಲ್ಲವೇ? ಪ್ರತಿದಿನವೂ ನಿಮ್ಮ ಗಾಡಿಯನ್ನೆ ಹುಡುಕಿ ಬರ್ತಾ ಇದ್ದ ಕಸ್ಟಮರ್ಸ್ ಬೇರೆಯವರನ್ನು ಹುಡುಕಿ ಹೊರಟಾಗ ನಿಮಗೆ ನೋವಾಗಿಲ್ಲವೇ? ಇಲ್ಲ ಸರ್ ಬೇರೆಯವರು ಬದುಕಬೇಕಲ್ಲ, ಪ್ರತಿದಿನವೂ ಕಿರಿಕಿರಿ ಅಂತ ನನಗೆ ಅನಿಸುವುದಿಲ್ಲ, ವೈಯಕ್ತಿಕವಾಗಿ ಏನಾದರೂ ಸಮಸ್ಯೆ ಆದರೆ ಅದನ್ನ ಪರಿಹಾರ ಮಾಡ್ಕೊತೀನಿ ,ಯಾವುದೇ ವಿಚಾರವನ್ನು ತಲೆಗೆ ವಿಪರೀತವಾಗಿ ತೆಗೆದುಕೊಂಡು ಮನಸ್ಸು ಹಾಳು ಮಾಡಿಕೊಳ್ಳುವುದಿಲ್ಲ ಎಲ್ಲವೂ ಒಳಿತೇ ಆಗುತ್ತೆ, ಅನಗತ್ಯ ಯೋಚನೆ ಮಾಡಿ ನೆಮ್ಮದಿ ಹಾಳು ಮಾಡಿಕೊಳ್ಳುವುದಕ್ಕಿಂತ ಈ ದಿನ ಬದುಕಿ ಬಿಡೋದು ಒಳ್ಳೆಯದಲ್ಲವೇ. ಹೀಗೆ ರಾಜೇಶರ ಮಾತನ್ನ ಕೇಳ್ತಾ ಕೇಳ್ತಾ, ನಾನು ಇಳಿಯುವ ಸ್ಥಳ ಬಂದಿದ್ದೇ ತಿಳಿಯಲಿಲ್ಲ. ಅವರ ಬಳಿ ಗಾಡಿಯನ್ನು ನಿಲ್ಲಿಸುವುದಕ್ಕೆ ಹೇಳಿ ನಾನು ಇಳಿದುಕೊಂಡುಬಿಟ್ಟೆ. ರಾಜೇಶರ ಗಾಡಿ ಮುಂದೆ ಹೋಯ್ತು. ಗಾಡಿಯ ಹಿಂದೆ ಬಿ ಪಾಸಿಟಿವ್ ಅನ್ನೋದನ್ನು ಕೆಂಪು ಅಕ್ಷರದಲ್ಲಿ ಬರೆದಿದ್ದದ್ದು ಮಸುಕು ಮಸುಕಾಗಿದ್ದರು ಅವರ ದಿನಚರಿಯಲ್ಲಿ ಎದ್ದು ಕಾಣುತ್ತಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ