ಸ್ಟೇಟಸ್ ಕತೆಗಳು (ಭಾಗ ೧೩೧೬) - ಬದುಕಿನಾಟ

ಬದುಕಿನ ದಾರಿಗಳು ಬೇರೆ ಬೇರೆ ರೀತಿಯಾಗಿರುತ್ತದೆ. ರಸ್ತೆಯ ತಿರುವಿನಲ್ಲಿ ಪುಟ್ಟದೊಂದು ಗದ್ದೆ. ಆ ಗದ್ದೆಯ ಮಧ್ಯದಲ್ಲಿ ನಾಲ್ಕು ಕಂಬಗಳನ್ನು ನೆಟ್ಟು ಮಧ್ಯದಲ್ಲೊಂದು ಗುಂಡಿ ತೋಡಿ, ಅದರೊಳಗೆ ಮಲಗುವ ಸಾಹಸ ಮಾಡುತ್ತಿದ್ದಾರೆ. ಒಳಗೆ ಹೋಗಿ ಮಣ್ಣೆಳೆದುಕೊಂಡು ಕೆಲವು ನಿಮಿಷಗಳಾದ ನಂತರ ಮತ್ತೆ ಎದ್ದು ಹೊರ ಬರುವ ತವಕ. ಹಲ್ಲಿನಲ್ಲಿ ಹಗ್ಗ ಕಚ್ಚಿ ದೊಡ್ಡದಾದ ಕಾರನ್ನು ರಸ್ತೆಯ ಉದ್ದಕ್ಕೂ ಎಳೆಯುವ ಹಠ, ತಲೆಯ ಮೇಲೆ ಬೆಂಕಿ ಇಟ್ಟು ಚಹಾ ಕಾಯಿಸುವ ಧೈರ್ಯ, ಹಾಡು ಹಾಕಿ ದೇಹ ದಂಡಿಸಿ ಕುಣಿಯುವ ಆಸೆ, ಟ್ಯೂಬಲೈಟ್ ಗಳನ್ನು ಒಡೆದು ಅದರ ಮೇಲೆ ಮಲಗಿ ಮತ್ತೆ ಬೆನ್ನ ಮೇಲೆ ಇನ್ನೊಂದಷ್ಟನ್ನು ಹೊಡೆದು ಶಕ್ತಿ ತೋರಿಸುವ ಹುಮ್ಮಸ್ಸು. ಇದೆಲ್ಲ ಬದುಕಿನ ಹೋರಾಟಗಳು. ಆಟ ನೋಡಿದವರು ಹಾಕುವ ನಾಲ್ಕು ಕಾಸಿನಿಂದ ಹೊಟ್ಟೆ ತುಂಬಿಸುವುದು. ಇವರು ಎಲ್ಲ ವಿದ್ಯೆಗಳನ್ನು ಕಲಿತು ಪಳಗಿ ಬಂದವರಲ್ಲ ಹೊಟ್ಟೆಯ ಹಸಿವು ಅವರೊಂದಿಗೆ ಎಲ್ಲಾ ಆಟಗಳನ್ನು ಆಡಿಸುತ್ತಿದೆ. ನೋಡುಗರಿಗೆ ಸಂಭ್ರಮ ಬೇಸರ ಎಲ್ಲವೂ ಒಟ್ಟಿಗೆ ಆಗುತ್ತದೆ ನೋಡುವ ಕಣ್ಣುಗಳಿಗೆ ಬದುಕು ಇಷ್ಟು ಕ್ರೂರವಾಗಿರಬಾರದು ಅಂತ ಅನ್ನಿಸ್ತದೆ. ಆದರೆ ನೋಡಿ ಖುಷಿಪಟ್ಟು 100, 200 ಹಾಕಿ ಹೊರಟು ಬಿಡುತ್ತಾರೆ. ಮರುದಿನ ಇನ್ನೊಂದು ಗದ್ದೆಯಲ್ಲಿ ಇದೇ ಪ್ರದರ್ಶನ ಮುಂದುವರೆಸುತ್ತಾರೆ. ಒಟ್ಟಿನಲ್ಲಿ ಬದುಕು ಒಬ್ಬೊಬ್ಬರದು ಒಂದೊಂದು ರೀತಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ