ಸ್ಟೇಟಸ್ ಕತೆಗಳು (ಭಾಗ ೧೩೧೭) - ಬಾಳ ಸಂಗಾತಿ

ರಾಮಯ್ಯ ಮಗಳ ಬಳಿ ಮತ್ತೆ ಮತ್ತೆ ಕೇಳಿದ್ದ ನಿನ್ನ ಬಾಳ ಸಂಗಾತಿ ಆಯ್ಕೆ ಸರಿಯಾಗಿದೆ ತಾನೆ. ಅಪ್ಪ ಒತ್ತಿ ಕೇಳಿದಾಗಲೂ ಮಗಳ ಉತ್ತರ ಹಾ ಎನ್ನುವುದಾಗಿತ್ತು. ಯಾಕೆಂದರೆ ಪ್ರೀತಿಸಿದ್ದಳು. ಮದುವೆಯೂ ಆಗಿತ್ತು. ಕೆಲವು ದಿನ ವಾರ ತಿಂಗಳು ಸ್ವರ್ಗವೇ ಜೊತೆಯಾಗಿತ್ತು. ಆಮೇಲೆ ಬದುಕಿನ ಹೊಸ ದಾರಿ ಅರ್ಥವಾಗತೊಡಗಿತು. ಹೊಸ ಮುಖಗಳು ಪರಿಚಯವಾದವು. ಆತ ಜೊತೆ ನಿಲ್ಲುತ್ತಿಲ್ಲ, ಬೈಗುಳ ಸಿಟ್ಟು, ಅಧಿಕಾರವೇ ದಿನದ ಊಟವಾಗಿದೆ. ಹಿಂದಿದ್ದ ಪ್ರೀತಿ ಕಾಣುತ್ತಿಲ್ಲ, ಯಾವ ಕನಸಿಗೂ ಜೊತೆಯಾಗುತ್ತಿಲ್ಲ, ಅವನಿಗೂ ಒಂದು ದಿನವೂ ಆಕೆ ಇಷ್ಟವಾಗುತ್ತಿಲ್ಲ. ಅವನೂ ದೂರವಾಗುತ್ತಿದ್ದಾನೆ, ಮನಸ್ಸಿನಿಂದ ದಿನೇ ದಿನೇ ಇಬ್ಬರ ನಡುವೆ ಕಂದಕ ಸೃಷ್ಠಿಯಾಗಿದೆ. ಇಬ್ಬರೂ ದೂರವಾಗುವ ಮಾತು ಹೆಚ್ಚಾಗಿದೆ. ಆಕೆಗೆ ಮತ್ತೆ ನೆನಪಾಯಿತು ಅಪ್ಪ ಹೇಳಿದ ಮಾತು. ಬಾಳ ಸಂಗಾತಿ ಆಯ್ಕೆ ಸರಿಯಾಗಿದೆಯಾ ? ಮದುವೆ ಆಗುತ್ತೆ, ಗಂಡನೂ ಇರ್ತಾನೆ ಆದರೆ ಬಾಳ ಸಂಗಾತಿ ಆಗ್ತಾನ ಅನ್ನೋದೆ ಪ್ರಶ್ನೆ. ತಾನು ಎಡವಿದಂತೆ ಯಾರೂ ಎಡವಬಾರದು. ಬಾಳ ಸಂಗಾತಿಯ ಆಯ್ಕೆಯಲ್ಲಿ ಆಕೆ ಕಣ್ಣೀರು ಇಳಿಸುತ್ತಾ ಭಗವಂತನ ಪ್ರಾರ್ಥಿಸಿದಳು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ