ಸ್ಟೇಟಸ್ ಕತೆಗಳು (ಭಾಗ ೧೩೧೮) - ಒಳಗಿನ ಜಿರಳೆ

ಸ್ಟೇಟಸ್ ಕತೆಗಳು (ಭಾಗ ೧೩೧೮) - ಒಳಗಿನ ಜಿರಳೆ

ಪಕ್ಕದ ಮನೆಯವನಿಗೆ ನನ್ನನ್ನ ಕಂಡರಾಗುವುದಿಲ್ಲ. ಅವನಿಗೆ ನನ್ನ ಮೇಲಿನ ದ್ವೇಷಕ್ಕೆ ಕಾರಣ ನಾನು ಸರಿದಾರಿಯಲ್ಲಿ ಪ್ರಸಿದ್ಧನಾಗ್ತಾ ಇರೋದು. ಅದಕ್ಕಾಗಿ ಆತ ನನ್ನ ಮಾನಸಿಕ ಸ್ಥಿತಿಯನ್ನ, ನೆಮ್ಮದಿಯನ್ನ ಹಾಳು ಮಾಡುವುದಕ್ಕಂತಲೇ ಅವರ ಮನೆಯಲ್ಲಿ ಒಂದಷ್ಟು ಜಿರಳೆಗಳನ್ನ ತಯಾರಿ ಮಾಡಿ ನನ್ನ ಮನೆ ಒಳಗೆ ಕಳುಹಿಸುತ್ತಿದ್ದಾನೆ. ಮೊದಮೊದಲು ನನಗೇನು ಅದರಿಂದ ಸಮಸ್ಯೆ ಆಗಲಿಲ್ಲ ಆದರೆ ಯಾವಾಗ ನನ್ನ ಮನೆಯವರಿಗೆ ಅದರಿಂದ ತೊಂದರೆ ಆಗುವುದಕ್ಕೆ ಪ್ರಾರಂಭ ಆಯಿತೋ, ಅದನ್ನ ನಾಶ ಮಾಡುವುದಕ್ಕೆ ನಾನು ಒಂದಷ್ಟು ಮದ್ದುಗಳನ್ನು ತರಿಸಿಕೊಂಡೆ. ಆದರೆ ಎಲ್ಲಾ ಮದ್ದುಗಳಿಗೂ ಅದರತ್ತರ ಪ್ರತ್ಯುತ್ತರವಿತ್ತು. ಹಾಗಾಗಿ ಹೊಸ ಹೊಸ ಮದ್ದುಗಳ ಆವಿಷ್ಕಾರ ಮಾಡುತ್ತಾ ಅದನ್ನ ನನ್ನ ಮನೆಯಲ್ಲಿ ನಾಶ ಮಾಡುವುದಲ್ಲದೆ ಅವನ ಮನೆಗೂ ತೆರಳಿ ನಾಶ ಮಾಡುವುದ್ದಕ್ಕೆ ಪ್ರಾರಂಭ ಮಾಡಿದೆ . ನನಗೆ  ನೆಮ್ಮದಿಯಾದಿತು ಜಿರಳೆಗಳು ನಾಶವಾದವು ಅಂತ. ಆದರೆ ಸಮಸ್ಯೆ ಕಡಿಮೆಯಾಗಲೇ ಇಲ್ಲ .ಮತ್ತೆ ಅರ್ಥವಾಯಿತು ಅವನ ಮನೆಯ ಜಿರಳೆಗಳಿಗೆ ನನ್ನ ಮನೆಯೊಳಗೆ ಬರುವುದಕ್ಕೆ ದಾರಿ ತೋರಿಸಿದ್ದೆ ನನ್ನ ಮನೆ ಒಳಗೆ ಅಬಿತುಕೊಂಡಿದ್ದ ಜಿರಳೆಗಳು. ನಾನು ಅದನ್ನು ಜಿರಳೆಗಳು ಅಂತ ಅಂದುಕೊಂಡೆ ಇರಲಿಲ್ಲ. ಅದು ನನ್ನ ಮನೆಯೊಳಗೆ ಇದ್ದದ್ದು. ಆದರೆ ಅವನ ಮನೆಯಿಂದ ಬಂದ ಜಿರಳೆಗಳಿಗೆ ನನ್ನ ಮನೆಯ ಜಿರಳೆಗಳು ಸಹಾಯ ಮಾಡಿ ಆಹಾರದಲ್ಲಿ ವಿಷ ಬೆರೆಸ್ತಾ, ಹೋಗಿ ಬರುವ ದಾರಿಯಲ್ಲಿ ತೊಂದರೆ ನೀಡುತ್ತಾ ಮನೆಯವರ ಸಾವಿಗೆ ,ಆರೋಗ್ಯ ಕೆಡುವುದಕ್ಕೆ ಮನೆ ಅಭಿವೃದ್ಧಿಯಾಗದಂತೆ ವಿವಿಧ ರೀತಿಯ ಪ್ರಯತ್ನಗಳನ್ನ ಮಾಡ್ತಾ ಹೋದವು. ನಮಗೆ ಅವನ ಮನೆಯ ಜಿರಳೆಗಳ  ಸಮಸ್ಯೆಯಲ್ಲ. ನನ್ನ ಮನೆಯೊಳಗೆ ಅವಿತುಕೊಂಡಿರುವ ನನಗೆ ಕಾಣದೇ ಇರುವ ಜಿರಳೆಗಳದ್ದೇ ಸಮಸ್ಯೆ. ನನ್ನ ಬಳಿ ಇದಕ್ಕೆ ಮದ್ದಿಲ್ಲ ದಯವಿಟ್ಟು ಮದ್ದು ಕೊಡಿ ನನಗೆ ನನ್ನ ಮನೆಯನ್ನು ಉಳಿಸಿಕೊಳ್ಳಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ