ಸ್ಟೇಟಸ್ ಕತೆಗಳು (ಭಾಗ ೧೩೧೯) - ವಿಪರ್ಯಾಸ

ಆ ತಾಯಿಯಲ್ಲಿ ತುಂಬಾ ಕನಸುಗಳಿದ್ದವು. ತನ್ನ ಮಕ್ಕಳನ್ನು ಅದ್ಭುತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಅಂದುಕೊಂಡಳು, ಮಕ್ಕಳು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಕ್ಕಳು ಬಹುಮಾನ ತಂದಾಗ ತಾಯಿ ಮನೆಯಲ್ಲಿ ಸಂಭ್ರಮ ಪಡುತ್ತಿದ್ದಾಳೆ. ಎಲ್ಲಾ ಬಹುಮಾನಗಳನ್ನ ಮನೆಯ ಗೋಡೆಯಲ್ಲಿ ಅಲ್ಲಲ್ಲಿ ನೇತುಹಾಕಿ ಪ್ರತಿದಿನವೂ ಆ ಬಹುಮಾನವನ್ನು ನೋಡಿ ಖುಷಿಪಡುತ್ತಿದ್ದಳು. ದಿನಗಳ ಹಾಗೆ ಉರುಳಿದವು. ಮನೆಯಲ್ಲಿ ಇದ್ದ ಮೂರು ಮಕ್ಕಳಲ್ಲಿ ಮೊದಲನೇಯವನಿಗೆ ದೊಡ್ಡ ಕೆಲಸ ಒಂದು ಸಿಕ್ಕಿತು. ಆತ ನೆಲವನ್ನು ಬಿಟ್ಟು ಆಕಾಶದಲ್ಲಿ ಹಾರಿದ. ಹೊರದೇಶದಲ್ಲಿ ದುಡ್ಡು ಸಂಪಾದಿಸಿ ಹೆಸರು ಸಂಪಾದಿಸಿ ತನ್ನ ಒಡಹುಟ್ಟಿದವರನ್ನು ಅಲ್ಲಿಗೆ ಕರೆಸಿಕೊಂಡ. ಮನೆಯಲ್ಲಿ ತಾಯಿ, ಮಕ್ಕಳ ಸಂಭ್ರಮವನ್ನು ಎಲ್ಲರೊಂದಿಗೆ ಖುಷಿಯ ವಿಚಾರವನ್ನು ಹಂಚಿಕೊಳ್ಳುತ್ತಾ ಹಂಚಿಕೊಳ್ಳುತ್ತಾ ಒಂಟಿಯಾಗಿ ಬಿಟ್ಟಳು. ಆಕೆ ಇಂದು ಕೂಡ ಒಂಟಿಯಾಗಿದ್ದಾಳೆ. ಮನೆಯಲ್ಲಿ ಆಗಾಗ ಮಕ್ಕಳ ಫೋನ್ ರಿಂಗಣಿಸುತ್ತದೆ. ಒಂದೆರಡು ಮಾತನಾಡುತ್ತಾರೆ .ಇತ್ತೀಚಿಗೆ ಅದೂ ಕಡಿಮೆಯಾಗುತ್ತದೆ. ಮನೆಯಲ್ಲಿರುವ ನಾಯಿ ಆಕೆಯ ಜೊತೆಗೆ ಬದುಕ್ತಾ ಇದೆ. ಅನ್ನ ಹಾಕಿದ್ದಕ್ಕೆ ನಾಯಿ ಜೊತೆಗಿದೆ. ಪ್ರತಿ ದಿನವೂ ಆಕೆಯ ಪ್ರತಿ ಹೆಜ್ಜೆಯಲ್ಲೂ ಜೊತೆಗೆ ಇದೆ. ನಾಯಿಗೆ ಅರ್ಥವಾದದ್ದು, ಮಕ್ಕಳಿಗೆ ಅರ್ಥವಾಗದಿರುವುದು ವಿಪರ್ಯಾಸ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ