ಸ್ಟೇಟಸ್ ಕತೆಗಳು (ಭಾಗ ೧೩೨೦) - ಬದುಕಿನ ಮಳೆ

ನಿನಗೆ ಬದುಕಿನ ಕತೆ ಹೇಳ್ತೇನೆ ಹೀಗಂತ ಅಜ್ಜ ಹೇಳಿ ಪಕ್ಕದಲ್ಲಿ ಕುಳಿತುಬಿಟ್ರು. ಬದುಕಿಗೂ ಮಳೆಗೂ ತುಂಬಾ ಹತ್ತಿರದ ಸಂಬಂಧ ಮಗಾ ಈ ಮಳೆ ಆಕಾಶದ ಒಡಲಿನಿಂದ ಭೂಮಿಗೆ ಕಾಲಿಡುವ ಕೆಲವು ಕ್ಷಣಗಳ ಮೊದಲಿನವರೆಗೆ ಯಾವುದೇ ಕಲ್ಮಶಗಳನ್ನು ಹೊಂದಿರುವುದಿಲ್ಲ. ಭೂಮಿಗೆ ಕಾಲಿಟ್ಟ ತಕ್ಷಣ ಇಲ್ಲಿಯ ವಾತಾವರಣಕ್ಕೆ ಸರಿಯಾಗಿ ಕಲ್ಮಶಗಳನ್ನು ತಾನು ಮೆಟ್ಟಿಕೊಳ್ಳುತ್ತೆ .ಅಲ್ಲಿಂದ ಮುಂದುವರಿತಾ ಮುಂದುವರಿತಾ ಸಣ್ಣ ತೊರೆಗಳಲ್ಲಿ ಹರಿಯುತ್ತಿರುವಾಗ ಎಲ್ಲೋ ಒಂದು ಕಡೆ ಕಲ್ಲುಗಳ ಮಧ್ಯದಲ್ಲಿ ಹಾದು ಹೋಗುವಾಗ ಒಂದಷ್ಟು ಕಸ ಕಡ್ಡಿಗಳನ್ನ ಅಲ್ಲಿಗೆ ಬದಿಗೆ ಸರಿಸಿ ನದಿಯ ಕಡೆಗೆ ಧಾವಿಸುತ್ತದೆ. ನದಿಯಲ್ಲಿ ಸ್ವಚ್ಛ ನೀರು ಮೇಲೆ ಕಾಣಿಸುತ್ತದೆ ಆದರೆ ತಳದಲ್ಲಿ ಕೆಸರು ಅವಿತು ಕುಳಿತಿರುತ್ತದೆ. ಸಮುದ್ರ ಸೇರುವಾಗ ನದಿ ಎಷ್ಟೇ ಬೇಡಿಕೊಂಡರು ಸಮುದ್ರ ನೀರನ್ನು ಸ್ವಚ್ಛ ಮಾಡಿ ತನ್ನೊಡಲಿಗೆ ಕರೆದುಕೊಳ್ಳುತ್ತದೆ. ಮತ್ತೆ ನೀರು ಆವಿಯಾಗಿ ಮಳೆಯ ದಾರಿಯನ್ನು ಹಿಡಿತದೆ. ನಾವು ಕೂಡ ಭೂಮಿಗೆ ಕಾಲಿಟ್ಟ ತಕ್ಷಣ ಹೆಸರು ಜಾತಿ ಅಂತಸ್ತು ಎಲ್ಲವನ್ನ ಮೈಗೆ ಹಚ್ಚಿಕೊಂಡು ಸಮಾಜದ ಮಧ್ಯದಲ್ಲಿ ಹರಿದು ಹೋಗುತ್ತೇವೆ. ಸಮಾಜದಲ್ಲಿ ಸಿಕ್ಕ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಂಡು ನಮ್ಮ ಕಲ್ಮಶಗಳನ್ನು ಅಲ್ಲಲ್ಲಿ ಕಳೆದುಕೊಳ್ಳುತ್ತಾ ಹೋಗ್ತೇವೆ ಸಮಾಜದಲ್ಲಿ ಬದುಕಬೇಕು ಅನ್ನುವ ಕಾರಣಕ್ಕೆ ಒಂದಷ್ಟು ಕೆಟ್ಟ ಯೋಚನೆಗಳನ್ನು ನಮ್ಮೊಳಗೆ ಅವಿತಿಟ್ಟುಕೊಂಡು ಸಭ್ಯರಾಗಿ ಸಾಗುತ್ತಾ ಹೋಗುತ್ತೇವೆ. ಕೊನೆಗೊಂದಿನ ಉಸಿರು ನಿಲ್ಲಿಸುವ ಕ್ಷಣದಲ್ಲಿ ಭಗವಂತ ನಮ್ಮೆಲ್ಲ ಕಲ್ಮಶಗಳನ್ನು ಈ ಭೂಮಿಯಲ್ಲಿ ಬಿಟ್ಟು ತುಂಬಾ ಪವಿತ್ರವಾದ ಆತ್ಮವನ್ನು ತನ್ನೊಡಲಿಗೆ ಕರೆದುಕೊಂಡು ಹೋಗುತ್ತಾನೆ. ಇದು ನಮ್ಮ ಜೀವನದ ಚಕ್ರ .ನೀನು ಆದಷ್ಟು ಕಡಿಮೆ ಕಲ್ಮಶಗಳನ್ನು ಹೊತ್ತುಕೊಂಡ ಹಾಗೆ ಬೇಗ ಸಮುದ್ರವನ್ನು ಸೇರ್ತಿಯ. ಭಗವಂತನಿಗೆ ಹೆಚ್ಚು ಹತ್ತಿರವಾಗ್ತೀಯಾ? ಒಳಗೂ ಹೊರಗೂ ಕಲ್ಮಶಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ಸಾಗಬೇಕು. ಒಳ್ಳೆಯದಾಗುತ್ತೆ. ಅಜ್ಜನ ಮಾತು ಮೊಮ್ಮಗನಿಗೆ ಅರ್ಥವಾಗಿತ್ತು. ಅದನ್ನೇ ಯೋಚಿಸಿ ಶಾಲೆಯ ಕಡೆಗೋಡಿದ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ