ಸ್ಟೇಟಸ್ ಕತೆಗಳು (ಭಾಗ ೧೩೨೬) - ನೆನಪಿಸು

ಇದು ಮರೆವಿನ ಲೋಕ ಮಾರಾಯ, ಕ್ಷಣದಲ್ಲಿ ಮರೆತು ಮುಂದುವರಿಯುತ್ತಾರೆ. ನೀನೇ ಪ್ರತೀ ಕ್ಷಣ ನೆನಪಿಸಬೇಕು. ನಿನಗೆ ಬೇಕಾದ್ದು ನ್ಯಾಯ ತಾನೇ ಬೇಕಾದರೆ ಮತ್ತೆ ಮತ್ತೆ ಕೇಳು. ಕಳೆದುಕೊಂಡದ್ದು ನೀನು ಹಾಗಾಗಿ ಕೇಳಿ ಪಡೆದುಕೊಳ್ಳಲೇ ಬೇಕು. ನಿನ್ನ ಮನೆಯ ಮಗುವಿನ ಸಾವಾಗಿದೆ, ಅದಕ್ಕೆ ಊರೇ ಹೋರಾಟ ಮಾಡಿದೆ, ಎಲ್ಲರೂ ಭಾಷಣ ಮಾಡಿದ್ದಾರೆ. ಮೊಬೈಲ್ ಒಳಗೆ ಹೋರಾಟದ ಕಿಚ್ಚು ಹಚ್ಚಿದ್ದಾರೆ, ಟಿ.ವಿ ಒಳಗೆ ಸುದ್ದಿ ಸದ್ದಾಗಿದೆ. ನ್ಯಾಯ ಯಾವತ್ತು ಸಿಗುವುದೋ ಗೊತ್ತಿಲ್ಲ, ನಿನ್ನ ಬಳಿ ದುಡ್ಡಿಲ್ಲವಲ್ಲ, ಹಾ ಈಗ ನಿನ್ನದೇ ಜನ, ನಿನ್ನದೇ ಟಿವಿ ಮೊಬೈಲ್ ಒಳಗೆ ಹೊಸ ಸುದ್ದಿ ಓಡಾಡುತ್ತಿದೆ ಯಾರೋ ಚಲನಚಿತ್ರ ನಟಿ ಗರ್ಬಿಣಿಯಾಗಿದ್ದಾಳಂತೆ, ನಿನ್ನ ಮರೆತಿದ್ದಾರೆ. ನಿನ್ನ ಅರಚಾಟ ಯಾವ ಕಿವಿಗೂ ಕೇಳುತ್ತಿಲ್ಲ. ಇನ್ನೊಂದು ಸಾವಾಗುವವರೆಗೂ ಹೋರಾಟ ಶಾಂತವಾಗಿರುತ್ತದೆ. ಮತ್ತೆ ಆಕ್ರೋಶ, ಕ್ಯಾಂಡಲ್ ಬೆಳಗಿಸಿ, ಬ್ಯಾನರ್ ಹಾಕಿ ಉಗ್ರ ರೂಪ ತೋರಿ ಮಾಯವಾಗಿ ಬಿಡುತ್ತಾರೆ. ಮತ್ತೆ ಹೇಳುತ್ತಿದ್ದೇನೆ, ಮರೆಯುತ್ತಾರೆ ಇವರು ನೀನು ಪ್ರತೀ ದಿನ ನೆನಪಿಸಲೇ ಬೇಕು. ಹೀಗಂದ ನಾಗರಾಜರು ಬ್ಯಾಗ್ ಬೆನ್ನಿಗೇರಿಸಿ ಬೇರೆ ಸಂತ್ರಸ್ತರ ಮನೆಗೆ ನಡೆದರು. ಎಲ್ಲರನ್ನೂ ಎಚ್ಚರಿಸುವುದಷ್ಟೇ ಇವರ ಕೆಲಸ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ