ಸ್ಟೇಟಸ್ ಕತೆಗಳು (ಭಾಗ ೧೩೩೪) - ಬೆಕ್ಕು

ಒಂದು ನಿಮಿಷ ಮಾತನಾಡಬೇಕು ಇವತ್ತು ದಯವಿಟ್ಟು ನನ್ನ ಜೊತೆ ಮಾತನಾಡು ಹೀಗಂತ ಮನೆಯ ಬೆಕ್ಕು, ನನ್ನ ಮುಂದೆ ಹಠ ಕಟ್ಟಿ ಕುಳಿತು ಬಿಟ್ಟಿತು. ಸರಿ ಎಂದು ಒಪ್ಪಿಗೆ ನೀಡಿ ಪ್ರಾರಂಭಿಸು ಹೇಳಿದೆ. ನೋಡಿ ಇವತ್ತು ಬೆಳಗ್ಗೆಯಿಂದ ನನ್ನ ಬಗ್ಗೆ ಮನೆಯಲ್ಲಿ ದೂರುಗಳ ಪಟ್ಟಿ ಬೆಳಿತಾ ಇದೆ. ನಿನ್ನೆ ನೀವು ಮನೆಯಲ್ಲಿ ತಂದಿಟ್ಟ ಮೊಟ್ಟೆಯನ್ನು ನಾನು ತಿಂದಿದ್ದೇನೆ ಎಂದು ದೂರು ನಿಮ್ಮ ಮನೆಯಲ್ಲಿ ದಾಖಲಾಗಿದೆ. ನಾನೇ ಅದನ್ನ ಮಾಡಿದ್ದೇನೆ ಎನ್ನುವ ವಾದ ನಿಮ್ಮೆಲ್ಲರದು. ಆದರೆ ನಿಜ ಏನು ಅಂತಂದ್ರೆ ನಾನು ನಿನ್ನೆ ರಾತ್ರಿ ಈ ಮನೆಯೊಳಗೆ ಕಾಲಿಟ್ಟಿಲ್ಲ. ಇವತ್ತು ಬೆಳಗ್ಗೆ ಅಡುಗೆ ಕೋಣೆಯ ಮುಂದೆ ಹಾದು ಹೋಗಿದ್ದೇನೆ ಅನ್ನುವ ಕಾರಣಕ್ಕೆ ಆ ತಪ್ಪನ್ನು ನನ್ನ ತಲೆಗೆ ಕಟ್ಟಬೇಡಿ. ಹಿಂದೊಮ್ಮೆ ನೀವು ಅಡುಗೆ ಕೋಣೆಯಲ್ಲಿಟ್ಟ ಹಾಲನ್ನ ನಾನು ಕದ್ದು ಕುಡಿಯುವುದನ್ನು ನೀವು ನೋಡಿದ್ದೀರಿ. ಆ ಕಾರಣಕ್ಕೆ ನನಗೆ ಹೊಡೆತವು ಬಿದ್ದಿದೆ. ಅದಾದ ನಂತರ ಈ ಮನೆಯಲ್ಲಿ ಏನೇ ತಪ್ಪಾದರೂ ನಾನೇ ಆ ತಪ್ಪು ಮಾಡಿದ್ದೇನೆ, ನಾನು ಮಾಡದ ಎಲ್ಲ ತಪ್ಪಿಗೆ ನಾನೇ ಇಲ್ಲಿ ಶಿಕ್ಷೆ ಅನುಭವಿಸುತ್ತಿದ್ದೇನೆ. ಈ ಮನೆಗೆ ಕದ್ದು ಬರುವ ಇನ್ನೆರಡು ಬೆಕ್ಕುಗಳ ಬಗ್ಗೆ ನಿಮಗೆ ಅರಿವಿಲ್ಲ. ನನಗೆ ನನ್ನ ತಪ್ಪಿನ ಅರಿವಾಗಿದೆ ಒಂದು ಸಲ ಮಾಡಿದ ತಪ್ಪು ನಾವೆಷ್ಟೇ ಒಳ್ಳೆಯವರಾದರೂ ಅದು ಮಾಸುವುದಿಲ್ಲ. ಮತ್ತೆ ಕೇಳಿಕೊಳ್ಳುತ್ತಿದ್ದೇನೆ ನಿನ್ನೆಯ ತಪ್ಪು ನನ್ನದಲ್ಲ. ದಯವಿಟ್ಟು ಮನ್ನಿಸಿಬಿಡಿ. ಹೀಗಂದು ಬೆಕ್ಕು ಬೇಸರದಿಂದ ಮಳೆಯಲ್ಲೂ ನೆನೆಯುತ್ತಾ ಹೋಗಿಬಿಡ್ತು ನಾನು ಮತ್ತೊಮ್ಮೆ ಯೋಚಿಸುವುದಕ್ಕೆ ಆರಂಭ ಮಾಡಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ