ಸ್ಟೇಟಸ್ ಕತೆಗಳು (ಭಾಗ ೧೩೩೮) - ಆಯ್ಕೆ

ಸ್ಟೇಟಸ್ ಕತೆಗಳು (ಭಾಗ ೧೩೩೮) - ಆಯ್ಕೆ

ನಿನಗೆ ತುಂಬಾ ಸಲ ಹೇಳಿದ್ದೇನೆ. ಕಣ್ಣಿಗೆ ಕೆಲವೊಂದು ರಂಜನೀಯವಾಗಿ ಕಾಣುತ್ತದೆ ಮತ್ತು ಅದು ದುಬಾರಿಯೂ ಆಗಿರುತ್ತದೆ. ಆದರೆ ಅದರ ರಂಜನೆ ಕೆಲವು ಕ್ಷಣಗಳಲ್ಲಿ ಕಣ್ಣ ಮುಂದೆ ಖಾಲಿಯಾಗಿ ಬಿಡುತ್ತದೆ. ನೀನು ಹಬ್ಬಕ್ಕೆ ತಂದು ಆಕಾಶದ ತುಂಬೆಲ್ಲ ಸಿಡಿಯುವ ಸಿಡಿಮದ್ದಿನಂತೆ. ಇನ್ನು ಕೆಲವು ಕಣ್ಣಿಗೆ ರಂಜನೆಯನ್ನು ಕೊಡುವುದಿಲ್ಲ ಮತ್ತು ದುಬಾರಿಯೂ ಆಗಿರುವುದಿಲ್ಲ ಆದರೆ ನಿನ್ನ ಅಗತ್ಯಕ್ಕೆ ತಕ್ಕನಾಗಿ ನಿನ್ನ ಜೊತೆಗಿದ್ದು ನಿನಗೆ ದಾರಿ ತೋರಿಸುತ್ತದೆ ಮೇಣದಬತ್ತಿಯಂತೆ. ನಿನಗೆ ಕೆಲವೊಂದು ಸಲ ಮೇಣದ ಬತ್ತಿಗಿಂತ ಪಟಾಕಿಯೇ ಸಿಡಿಮದ್ದೆ ಖುಷಿಕೊಡುತ್ತದೆ. ಆದರೆ ಅದು ನಿನ್ನೊಂದಿಗೆ ಹೆಚ್ಚು ಸಮಯವೂ ಇರುವುದಿಲ್ಲ ನಿನ್ನ ಬದುಕಿಗೆ ದಾರಿಯೂ ತೋರಿಸುವುದಿಲ್ಲ. ಹಾಗಾಗಿ ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಎಚ್ಚರ ಇರಬೇಕು ನಿನ್ನ ಸುತ್ತಮುತ್ತ ಕ್ಷಣಕೊಮ್ಮೆ ಸಿಡಿಯುವ ಮದ್ದು ಗುಂಡುಗಳು ಸಾವಿರ ನಿಂತಿರುತ್ತವೆ ಅವುಗಳ ಮಧ್ಯೆ ನಿನ್ನ ಬದುಕಿಗೆ ಬೇಕಾದ ಮೇಣದ ಬತ್ತಿಯನ್ನು ಆಯ್ಕೆ ಮಾಡಿಕೊಂಡು ನಿನ್ನ ದಾರಿಗೆ ಬೆಳಕನ್ನು ನೀನೆ ಹುಡುಕಿಕೊಳ್ಳಬೇಕು. ಪರಿಚಯವಿಲ್ಲದ ಊರಿಗೆ ಕೆಲಸಕ್ಕೆ ಹೊರಡುವ ಮಗನ ಮುಂದೆ ತಂದೆ ಹೇಳಿದ ಮಾತುಗಳು ಮಗನ ಮನಸ್ಸಿನಲ್ಲಿ ಗಟ್ಟಿಯಾಗಿದ್ದವು. ಆತ ಅದನ್ನ ಅನುಸರಿಸುತ್ತಿದ್ದ ಬದುಕಿನಲ್ಲಿ ಸರಿದಾರಿಯಲ್ಲಿ ಸಾಗುತ್ತಿದ್ದ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ