ಸ್ಟೇಟಸ್ ಕತೆಗಳು (ಭಾಗ ೧೩೩) - ದೂರ

ಸ್ಟೇಟಸ್ ಕತೆಗಳು (ಭಾಗ ೧೩೩) - ದೂರ

ಅಲೆಗಳು ದಡಕ್ಕಪ್ಪಳಿಸುತ್ತಿದೆ. ಹೊರಟಿದೆ ಯಾನ ನೀಲಿ ಶರಧಿಯೊಳಗೆ. ಅದೊಂದು ತೈಲ ಸಂಗ್ರಹಣೆಯ ಹಡಗು. ಅಲೆಯ ಮೇಲಿನ ತೇಲುವ ಬದುಕು ಅವರದು. ವರ್ಷಕ್ಕೊಮ್ಮೆ ಮನೆಯ ಹೊಸ್ತಿಲು ತುಳಿಯುತ್ತಾರೆ. ಕ್ಷಣವೂ ಅಲೆಗಳು ತೀರವ ತಾಕುವಂತೆ ಅವರ ನೆನಪು ಮನೆಯವರಿಗೆ. ನೀರ ಮೇಲೆ ಪಯಣ ಆರಂಭವಾದ ಮೇಲೆ ಮಾಪನದಿಂದ ದಿಕ್ಕು ತಿಳಿಯಬೇಕೆ ಹೊರತು ನೀರು ಯಾವ ಮಾಹಿತಿಯನ್ನೂ ನೀಡುವುದಿಲ್ಲ. ಆಳ ಸಮುದ್ರದಲ್ಲಿ ನಿಲ್ಲಿಸಿ ಹಡಗುಗಳು ತೈಲ ಸಂಗ್ರಹಣೆಯ ಕೆಲಸ ಆರಂಭಿಸುತ್ತೆ. ಅದ್ಯಾವುದೋ ಲಾಕ್ ಡೌನ್ ನ ಕೂಗಿಗೆ ತೈಲ ಕಂಪನಿ ಕೆಲವು ದಿನ ಬಾಗಿಲು ಮುಚ್ಚಿತ್ತು. ಅಪರಿಚಿತ ತೀರದ ದ್ವೀಪವೊಂದರಲ್ಲಿ ಬೀಡುಬಿಟ್ಟರು. ವರ್ಷವಾಯಿತು? ಸುದ್ದಿ ಕಳುಹಿಸುವ ವ್ಯವಸ್ಥೆಯೂ ಇಲ್ಲ, ನಿಂತ ಹಡಗು ದುರಸ್ತಿ ಎಡೆಗೆ ಸಾಗಿತು. ನೀರಿನ ನಡುವೆ ನಿಂತ ದ್ವೀಪದ ತರ ಏಕಾಂಗಿಯಾದ ಬದುಕು ಅವರದಾಯಿತು. ಮಾಲಿಕನ ಸುದ್ದಿ ಇಲ್ಲ .ಮನೆಯೊಳಗಿನ ಚಿತ್ರಣದ ಅರಿವಿಲ್ಲ, ಹಣವಿಲ್ಲದೆ ಬೆಂಕಿಯಿಲ್ಲ, ಹೊಟ್ಟೆಯ ಹಸಿವು ಸಾಯುತ್ತಿಲ್ಲ, ಕೊನೆಗೇನೂ ಸಿಗದೆ ಉಪ್ಪುನೀರು ಹೊಟ್ಟೆಗಿಳಿಯಿತು. ನೀರಿನ ನಡುವೆ ಸ್ಥಿತಪ್ರಜ್ಞರಂತೆ ಬರುವ ದಾರಿಗೆ ಸೇತುವೆ ಕಟ್ಟುವವರನ್ನು ಅವರು ಕಾಯುತ್ತಿದ್ದಾರೆ. ತೀರದಲ್ಲಿ  ಅಲೆಗಳು ಏನಾದರೂ ಸುದ್ದಿ ತರುತ್ತವೋ ಎಂದು ಮನೆಯವರು ಕಾಯುತ್ತಿದ್ದಾರೆ. ಅಲೆ ಮಾತನಾಡುತ್ತಿದ್ದರೂ ಮನೆಯವರಿಗೆ ಅರ್ಥವಾಗುತ್ತಿಲ್ಲ ಅಷ್ಟೇ ?...

-ಧೀರಜ್ ಬೆಳ್ಳಾರೆ

ಸಾಂದರ್ಭಿಕ ಚಿತ್ರ: ಇಂಟರ್ನೆಟ್ ತಾಣ