ಸ್ಟೇಟಸ್ ಕತೆಗಳು (ಭಾಗ ೧೩೪೨) - ಅಲೆದಾಟ

ಸ್ಟೇಟಸ್ ಕತೆಗಳು (ಭಾಗ ೧೩೪೨) - ಅಲೆದಾಟ

ವೇದಿಕೆಯಲ್ಲಿ‌ ಆತ ಹಾಡುವುದ್ದಕ್ಕೆ‌ ನಿಂತರೆ ಎಲ್ಲರೂ ತಲೆದೂಗುತ್ತಾರೆ. ಹಾಗಾಗಿ‌ ಟಿವಿಯೊಳಗಿನ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದ. ಭಾಗವಹಿಸುವಿಕೆ ಎಲ್ಲರಿಗೂ ಪ್ರಿಯವಾಗುತ್ತಾ ಹೋಯಿತು. ಆತ ಗೆಲುವಿನ ಮೆಟ್ಟಿಲನ್ನ ಹತ್ತಲಾರಂಭಿಸಿದ. ಹೆಚ್ಚು ಹೆಚ್ಚು ಕಡೆ ಅವಕಾಶಗಳು ಸಿಗುತ್ತವೆ ಅನ್ನುವ ಸುದ್ದಿ ತಿಳಿಯಿತು. ಅಂತಿಮ ಹಂತದ ಸ್ಪರ್ಧೆಯಲ್ಲಿ ನಿರ್ಣಾಯಕರೇ ಆತನಿಗೆ ಮುಂದಿನ ಚಲನಚಿತ್ರದಲ್ಲಿ ಹಾಡಿಸುವ ಭರವಸೆಯನ್ನ ನೀಡಿದರು. ಆತನ ಜೀವನ ಬದಲಾಗುವ ಎಲ್ಲ ಲಕ್ಷಣಗಳು ಗೋಚರವಾಯಿತು. ಸ್ಪರ್ಧೆ ಮುಗಿಯಿತು ಆತನಿಗೆ ದೊಡ್ಡ ಬಹುಮಾನ ಸಿಗದೇ ಇದ್ದರೂ ಕೂಡ ಆತ ಜನ ಮೆಚ್ಚಿದ ಗಾಯಕನಾದ. ತೀರ್ಪುಗಾರರ ಚಲನಚಿತ್ರದ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಯಿತು, ಹಾಡುವ ಅವಕಾಶ ತನಗೆ ದೊರೆಯಬಹುದೆಂಬ ಆಸೆಯಿಂದ ಕಾಯುತ್ತ ಕುಳಿತಿದ್ದ ಗಾಯಕ ದಿನ ಕಳೆದರೂ ಅತ್ತ ಕಡೆಯಿಂದ ಸುದ್ದಿ ಬಾರದೇ ಇದ್ದದನ್ನ ಗಮನಿಸಿ ಅವರ ಬಳಿಗೆ ತೆರಳಿಬಿಟ್ಟ. ಈಗಾಗಲೇ ಆ ಚಿತ್ರದ ಹಾಡುಗಳನ್ನು ರಾಷ್ಟ್ರದ ಚಿರಪರಿಚಿತ ದೊಡ್ಡ ಗಾಯಕರ ಬಳಿ ಅವರು ಹಾಡಿಸಿಬಿಟ್ಟಿದ್ದರು. ಈತನ ಮುಖ ಪರಿಚಯ ಅವರಿಗೆ ಮರೆತು ಹೋಗಿತ್ತು. ನೋಡೋಣ ಮುಂದೆ ಅಂದು ಸುಮ್ಮನಾದರು. ಈಗ ಆತ ಹಾಡುತ್ತಿದ್ದಾನೆ ಅವಕಾಶಗಳಿಗೆ ಬೇಡುತ್ತಿದ್ದಾನೆ, ಮದುವೆ ಸಮಾರಂಭಗಳಲ್ಲಿ ಗೃಹಪ್ರವೇಶಗಳಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ. ಅವಕಾಶಕ್ಕಾಗಿ ಅಲೆಯುತ್ತಿದ್ದಾನೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ