ಸ್ಟೇಟಸ್ ಕತೆಗಳು (ಭಾಗ ೧೩೪೬) - ಕೈಗಳು

ಇಲ್ಲಿ ಎಲ್ಲರ ಕೈಗಳು ತುಂಬಾ ಉದ್ದವಾಗಿದೆ ಜೊತೆಗೆ ಯಾವ ಕಡೆಗೆ ಬೇಕಾದರೂ ಕ್ಷಣ ಮಾತ್ರದಲ್ಲಿ ತಿರುಗಿ ಬಿಡುತ್ತವೆ. ನಡೆದ ಘಟನೆಗಳ ಪಟ್ಟಿ ಮಾಡಿಕೊಂಡು ತಪ್ಪು ತಮ್ಮ ಮೇಲಿದ್ದರೂ ಅದನ್ನು ತೋರಿಸಿ ಕೊಳ್ಳದೆ ಇನ್ನೊಬ್ಬರ ಕಡೆಗೆ ಬೆಟ್ಟು ಮಾಡಿ ತೋರಿಸುವುದಕ್ಕೆ ಕೈ ಉದ್ದವಾಗಿದೆ, ಒಂದಷ್ಟು ಸಮಜಾಯಿಸಿಗಳ ಪಟ್ಟಿ ಮಾಡಿ ಕ್ಯಾಮರಾಗಳ ಮುಂದೆ ಕಣ್ಣೀರಿಳಿಸುವ ನಾಟಕ, ಇಳಿದ ಕಣ್ಣೀರನ್ನು ಒರೆಸಲು ಕೈ ಉದ್ದವಾಗಿದೆ, ವಿಷಯವೇ ಗೊತ್ತಿಲ್ಲದೇ ಕೊಟ್ಟ ಕೆಲಸವನ್ನ ಚಾಚು ತಪ್ಪದೆ ಮಾಡಿ, ಮಾಡಿದವನಿಗೆ ಎಲ್ಲರ ಮುಂದೆ ಕಪಾಳಕ್ಕೆ ಹೊಡೆದು ಆತನ ಅವಮಾನಿಸಲು ಕೈ ಉದ್ದವಾಗಿದೆ, ಮೋಸದ ಜಾಲ ಬೀಸುವುದಕ್ಕೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಇನ್ಯಾರದೋ ಚಿತೆಗೆ ಕೊಳ್ಳಿ ಇಡುವುದಕ್ಕೆ ಇವರ ಕೈ ಉದ್ದವಾಗಿದೆ. ಹಾಗಾಗಿ ಪಕ್ಕದಲ್ಲಿಯೂ ಹಾದು ಹೋಗಬೇಡ ನಿನ್ನ ಮೇಲೆ ಕೈ ಗುರುತುಗಳು ಬಿದ್ದು ನೀನು ಬಲಿಯಾಗಬಹುದು. ಎಚ್ಚರವಾಗಿರು ಬೆಳ್ಳಂಬೆಳಗ್ಗೆ ಅಪರಿಚಿತನ ಮಾತು ಎಚ್ಚರಗೊಳಿಸಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ