ಸ್ಟೇಟಸ್ ಕತೆಗಳು (ಭಾಗ ೧೩೪) - ಉತ್ತರ ಸಿಗದ ಪ್ರಶ್ನೆ?
ಅವನೊಳಗೆ ಮೌನ ಗಲಾಟೆ ನಡೆಸುತ್ತಿತ್ತು. ಮೌನವಾದ್ರಿಂದ ಕಾರಣವೇ ತಿಳಿಯುತ್ತಿಲ್ಲ. ಪರಿಣಾಮ ಮಾತ್ರ ತುಂಬಾ ತೀವ್ರತರವಾಗುತ್ತಿತ್ತು. ಋತುಚಕ್ರವು ತಿರುಗಿದಂತೆ ಅವನ ಬದುಕಿನಲ್ಲಿ ಅನಿರೀಕ್ಷಿತ ಘಟನೆಗಳು ಘಟಿಸಿ ಭಯವು ಮೃದು ಹೆಜ್ಜೆಗಳನ್ನು ಬಲವಾಗಿ ಊರಲಾರಂಭಿಸಿತು. ಬದುಕಿನ ಮುನ್ನೋಟಗಳು ಕಣ್ಣೆದುರು ಸುಳಿದಾಡಿ ಹೊಟ್ಟೆಯೊಳಗೊಂದು ಕಂಪನ ಏರ್ಪಟ್ಟಿತು. ಪರಿಹಾರವೇ ಇಲ್ಲದ ಸಮಸ್ಯೆಯೇ? ಎಂಬ ಚಿಂತೆಯಲ್ಲಿ ಮುಖದ ನಗು ಸ್ವಲ್ಪ ಸ್ವಲ್ಪವೇ ಬದಿಗೆ ಸರಿಯುಲಾರಂಬಿಸಿತು. ಕುಟುಂಬದ ಕಾರ್ಯಕ್ರಮವೊಂದಕ್ಕೆ ಹೋಗಿರದ ಊರಿನಲ್ಲಿ ನೋಡಿರದ ಅಜ್ಜನ ಮುಂದೆ ಪರಿಚಯ ಮಾಡಿಕೊಂಡ. ರಾಜ್ಯ ಬದಲಾಗಿದ್ದಕ್ಕೆ ಭಾಷೆಯ ತೊಡಕು ಎದುರಾದರೂ ಭಾಂಧವ್ಯದ ಬೆಸುಗೆಗೆ ಅದು ಅಡ್ಡಿಯಾಗಲಿಲ್ಲ. ನಗುವ ಕಣ್ಣುಗಳು ತೇಜಸ್ಸಿನ ಮುಖದ ಮೇಲೆ ಮಿನುಗುತ್ತಿವೆ. ಕುಶಲೋಪರಿ ನಡುವೆ ಹುಟ್ಟಿದ ಗಳಿಗೆ ದಿನದಿಂದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಮುಂದಾದರು ಅಜ್ಜ. " ನಿನ್ನೊಳಗೊಬ್ಬ ಕುಳಿತು ಆಡುತ್ತಿದ್ದಾನೆ, ನಿನ್ನದು ಬರವಣಿಗೆ ಮನಸ್ಸು, ಸಾಹಿತ್ಯದ ವರ್ಚಸ್ಸು. ಪಂಚದಶ ದಿನಗಳಿಗೊಮ್ಮೆ ಮನಸ್ಸೊಳಗಿನ ಸಮುದ್ರದ ಅಲೆ ಉದ್ರೇಕಗೊಳ್ಳುತ್ತದೆ .ಭವಿಷ್ಯದ ಹೆಜ್ಜೆಗಳು ಆಗಾಗ ಎದುರಾಗಿ ಮಾಯವಾಗುತ್ತದೆ ""ಹೌದು ಅಜ್ಜ ನೀವು ಹೇಳಿದ್ದು ನೂರಕ್ಕೆ ನೂರರಷ್ಟು" "ವಾರಕ್ಕೊಮ್ಮೆ ಉಪವಾಸ, ಈ ಪದಕವೊಂದನ್ನು ಧರಿಸು, ಶುಭವಾಗಲಿ". ಪಯಣ ಊರಿಗೆ. ಮೌನ ಗಲಾಟೆ ನಿಲ್ಲಿಸಿತ್ತು. ಸರೋವರ ಶಾಂತವಾಗಿತ್ತು. ತಪ್ಪಿದ ಹಾದಿ ಸರಿದಾರಿಗೆ ಮರಳಿತ್ತು. ನಂಬಿಕೆಯೇ ಬೆಳಕಿಗೆ ದಾರಿತೋರಿತ್ತು. ಅನಾಮಿಕ ಅಜ್ಜನಿಗೆ ನನ್ನೊಳಗಿನ ಮೌನದ ಪ್ರಶ್ನೆಗೆ ಉತ್ತರ ದೊರೆತದ್ದು ಹೇಗೆ ? ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ. ನಂಬಿಕೆಯ ಮುಂದೆ ಪ್ರಶ್ನೆ ದೊಡ್ಡದು ಅನ್ನಿಸಲಿಲ್ಲ.... ಅವನಿಗೆ
-ಧೀರಜ್ ಬೆಳ್ಳಾರೆ
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ