ಸ್ಟೇಟಸ್ ಕತೆಗಳು (ಭಾಗ ೧೩೫೩) - ಬೆಕ್ಕಿನ ಪಾಠ

ಸ್ಟೇಟಸ್ ಕತೆಗಳು (ಭಾಗ ೧೩೫೩) - ಬೆಕ್ಕಿನ ಪಾಠ

ಮನೆಗೊಂದು ಬೆಕ್ಕು ತಂದಿದ್ದಾರೆ. ತುಂಬಾ ಸಣ್ಣದಿರುವಾಗ ತಂದು ಮನೆಯಲ್ಲಿ ಸಾಕುವುದಕ್ಕೆ ಆರಂಭ ಮಾಡಿದ್ದಾರೆ. ಆ ಬೆಕ್ಕಿಗೆ ಬೇಕು ಬೇಡದನ್ನೆಲ್ಲ ಕೇಳಿ ನೀಡಿದ್ದಾರೆ, ಪ್ರೀತಿ ಸರ್ವಸ್ವವನ್ನು ಧಾರೆದಿದ್ದಾರೆ. ಆ ಮನೆಯಲ್ಲಿ ಬೆಕ್ಕು ಕೂಡ ಒಬ್ಬ ಸದಸ್ಯನಾಗಿ ಬದುಕೋದಕ್ಕೆ ಪ್ರಾರಂಭ ಆಯ್ತು. ಬೆಕ್ಕು ಬೆಳೆದು ದೊಡ್ಡವನಾಗಿತ್ತು. ಅದಕ್ಕೆ ಪಕ್ಕದ ಮನೆಯ ಇನ್ನೊಂದು ಬೆಕ್ಕಿನ ಮೇಲೆ ಪ್ರೀತಿ ಆಯ್ತು.  ಯಾವತ್ತೂ ಪ್ರೀತಿ ಆಯ್ತೋ ಆ ದಿನದಿಂದ ಬೆಕ್ಕು ಮನೆಯ ಕಡೆಗೆ ಬರುವ ಸಮಯ ಕಡಿಮೆ ಆಗ್ತಾ ಹೋಯ್ತು. ಊರಲೆಲ್ಲ ತಿರುಗಾಡ್ತಾ ಕೊನೆ ಕೊನೆಗೆ ಅದೇ ಬೆಕ್ಕಿನ ಮನೆಯಲ್ಲಿ ಬದುಕುದಕ್ಕೆ ಪ್ರಾರಂಭ ಆಯಿತು. ಯಜಮಾನ ಬೆಕ್ಕನ್ನ ಹುಡುಕಿ ಮನೆಗೆ ತರೋದು ಕಟ್ಟಿ ಹಾಕುವುದು ಒಂದು ವಾರದ ನಂತರ ಮತ್ತೆ ಮನೆಯಲ್ಲಿ ಉಳಿಯುತ್ತೆ ಅನ್ನುವ ನಂಬಿಕೆಯಲ್ಲಿ ಬಿಟ್ಟುಬಿಡೋದು ಬೆಕ್ಕು ಹಿಂದಿನ ಕೆಲಸವನ್ನು ಮತ್ತೆ ಮುಂದುವರಿಸೋದು. ಇದು ನಡಿತಾ ಇತ್ತು. ಒಂದು ದಿನ ಬೆಕ್ಕನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡು ಜೀವನದ ಪಾಠ ಮಾಡುವುದ್ದಕ್ಕೆ ಆರಂಬಿಸಿದರು. ಇಷ್ಟು ದಿನದವರೆಗೆ ನಿನ್ನನ್ನು ಸಾಕಿದರ ಅರ್ಥ ನಿನಗೆ ಗೊತ್ತಾಗ್ಲಿಲ್ವಾ, ನಮ್ಮ ಪ್ರೀತಿಗೆ ಮೌಲ್ಯವೇ ಇಲ್ವಾ? ನಿನ್ನಿಷ್ಟ ಬಂದಂತೆ ಬದುಕ್ತಾ ಇದ್ದೀಯ ಅಲ್ವಾ? ಆ ಬೆಕ್ಕು ನಿನ್ನನ್ನ ಯಾವ ರೀತಿ ಬೇಕಾದರೂ ನಡೆಸಿಕೊಳ್ಳಬಹುದು, ನಿನಗೆ ಅದರ ಬಗ್ಗೆ ಯೋಚನೆ ಇಲ್ಲವೆ? ಹೀಗೆ ಬೆಕ್ಕಿಗೆ ಬೋಧನೆ ಮಾಡಿದರು. ಅವರ ಮಾತನ್ನು ಕೇಳಿ ಬೆಕ್ಕು ತಲೆಕೆಳಗೆ ಹಾಕಿ ಹೊರಟು ಹೋಯಿತು. ಸ್ವಲ್ಪ ಸಮಯದ ನಂತರ ಆ ಮನೆಯ ಯಜಮಾನ ತಾನು ತನ್ನ ಪ್ರೀತಿಯನ್ನು ಪಡೆಯುವುದಕ್ಕೆ ಮನೆಯವರನ್ನು ತೊರೆದು ಅಪ್ಪ ಅಮ್ಮನನ್ನು ನಡು ನೀರಿನಲ್ಲಿ ಕೈ ಬಿಟ್ಟು ಬಂದದ್ದನ್ನು ನೆನಪಿಸಿಕೊಂಡ. ಬರಿಯ ಬೆಕ್ಕು ತನ್ನಿಂದ ತೊರೆದು ಹೋದಾಗ ಆಗುತ್ತಿರುವ ನೋವಿಗಿಂತ ಹೆಚ್ಚು ತಂದೆಯನ್ನು ತಾನು ತೊರೆದು ಬರುವಾಗ ತಂದೆಗೂ ಆಗಿರಬಹುದು  ಅನ್ನೋದು ಅರಿವಾಯಿತು. ಹೆಂಡತಿಯನ್ನು ಗಾಡಿಯಲ್ಲಿ  ಕೂರಿಸಿಕೊಂಡು ಮನೆಯ ಕಡೆಗೆ ಗಾಡಿ ಓಡಿಸಿದ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ