ಸ್ಟೇಟಸ್ ಕತೆಗಳು (ಭಾಗ ೧೩೫೬) - ಸ್ವರ್ಗ

ನಿನಗೆ ಸ್ವರ್ಗ ಬೇಕಿದ್ದರೆ ನೀನೇ ಸತ್ತು ಸ್ವರ್ಗಕ್ಕೆ ತೆರಳಿಬಿಡು, ಯಾರೋ ಸತ್ತು ನಿನಗೆ ಸ್ವರ್ಗ ಪ್ರಾಪ್ತಿ ಆಗುವುದಿಲ್ಲ. ಹೀಗಂದ ಬಾಲಕೃಷ್ಣರ ಮಾತು ಸ್ವಲ್ಪ ಖಾರವಾಗಿತ್ತು. ನನಗೆ ಅದನ್ನು ಅಷ್ಟು ಬೇಗ ಜೀರ್ಣಿಸಿಕೊಳ್ಳಲಾಗಲಿಲ್ಲ. ಹಾಗೆ ಅವರ ಮಾತನ್ನು ಮನಸ್ಸಿನೊಳಗೆ ಮತ್ತೆ ಮತ್ತೆ ಕೇಳುವುದಕ್ಕೆ ಆರಂಭಿಸಿದೆ. ಆಗ ಅದರ ಅದ್ಭುತ ಒಳಾರ್ಥಗಳು ಕಣ್ಣ ಮುಂದೆ ಕಾಣಿಸುವುದಕ್ಕೆ ಪ್ರಾರಂಭ ಆದವು. ಸ್ವರ್ಗ ಅನ್ನೋದು ಅದ್ಭುತ ಬದುಕಿನ ರೀತಿ. ನನ್ನ ಬದುಕನ್ನು ಅದ್ಭುತವಾಗಿಸಿಕೊಳ್ಳುವುದಕ್ಕೆ ನಾನೇ ಸತತ ಪ್ರಯತ್ನಗಳನ್ನು ಪಡಬೇಕು. ಇನ್ಯಾರೋ ಗೆಲುವನ್ನ ಕಂಡಾಗ ಇನ್ಯಾರೋ ಅವರ ಗುರಿಯನ್ನು ತಲುಪಿದಾಗ ನನ್ನ ಜೀವನದ ಕಥೆ ಬದಲಾವಣೆಗಳಾಗುವುದಿಲ್ಲ, ಬೇರೆ ಯಾರೋ ನನ್ನ ಬದುಕಿನ ಗೆಲುವಿಗೆ ಪ್ರಯತ್ನ ಪಡುವುದಿಲ್ಲ, ಅದು ತುಂಬಾ ಸಮಯ ನಮ್ಮ ಜೊತೆಗೆ ಇರುವುದು ಇಲ್ಲ. ನನ್ನ ಅನ್ನದ ತಟ್ಟೆಯಲ್ಲಿನ ಅನ್ನವನ್ನು ನಾನೆ ನನ್ನ ಕೈಯಾರೆ ತೆಗೆದು ಬಾಯಿಗೆ ಇಟ್ಟುಕೊಳ್ಳಬೇಕು. ಸ್ವಂತ ಪ್ರಯತ್ನದಲ್ಲಿ ಮಾತ್ರ ಗೆಲುವು ಸಾಧ್ಯ. ಇಷ್ಟೆಲ್ಲ ವಿಷಯಗಳು ಖಾರವಾದ ಮಾತಿನೊಳಗೆ ಗಟ್ಟಿಯಾಗಿ ಅಡಗಿ ಕುಳಿತಿದ್ದವು. ಯಾಕೋ ಅವರು ಹೇಳಿದ ಕ್ಷಣದಿಂದ ಮನಸ್ಸು ಇನ್ನೊಂದಷ್ಟು ಹೆಚ್ಚು ಪ್ರಯತ್ನವನ್ನು ಪಡುವುದಕ್ಕೆ ಸೂಚಿಸ್ತಾ ಹೋಯ್ತು. ಬುದ್ಧನಿಗೆ ಬೋದಿಮರದ ಕೆಳಗೆ ಜ್ಞಾನೋದಯವಾಯಿತಂತೆ ನನಗೆ ಇವರ ಖಾರವಾದ ಮಾತಿನಿಂದ ಬದಲಾವಣೆಯಾಗುವ ಸೂಚನೆ ಕಾಣಿಸಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ