ಸ್ಟೇಟಸ್ ಕತೆಗಳು (ಭಾಗ ೧೩೫೭) - ವಿಪರ್ಯಾಸ

ಸ್ಟೇಟಸ್ ಕತೆಗಳು (ಭಾಗ ೧೩೫೭) - ವಿಪರ್ಯಾಸ

ಶಿವಪ್ಪನ ಮನೆಯ ಬೆಕ್ಕು ಇತ್ತೀಚಿಗೆ ಹೊರಗೆ ಓಡಾಡಲು ಪ್ರಾರಂಭ ಮಾಡಿದೆ. ಊರು ತಿರುಗ್ತಾ ಇರೋದು ಬರಿಯ ಆಟಕ್ಕೆ ಮಾತ್ರವಲ್ಲ ತನ್ನೊಂದಿಗೆ ಬಳಗವನ್ನು ಒಟ್ಟುಗೂಡಿಸಬೇಕೆನ್ನುವ ಆಸೆಯಿಂದ. ಪ್ರತಿದಿನ ಮನೆಯಲ್ಲಿ ಅದಕ್ಕೆ ಹಾಕಿದ ಆಹಾರವನ್ನು ಸ್ವಲ್ಪ ತಿಂದು ತನ್ನ ಗೆಳೆಯರನ್ನ ಹತ್ತಿರ ಕರೆಯುತ್ತದೆ. ಅವರೆಲ್ಲರೂ ಸ್ವಲ್ಪ ಸ್ವಲ್ಪ ತಿಂದು ತಟ್ಟೆ ಖಾಲಿ ಮಾಡಿ ಇನ್ನೊಂದು ಮನೆಗೆ ಹೊರಡುತ್ತಾರೆ. ಹೀಗೆ ಇರುವ ಅಷ್ಟೂ ಮನೆಗಳ ಭೇಟಿ ಮುಗಿಸಿಕೊಂಡು ಸಂಜೆ ಅವರವರ ಮನೆಗೆ ತೆರಳುತ್ತಾರೆ. ಅವರ ನಡುವೆ ಜಗಳವಾಗ್ತದೆ, ಆದರೆ ಮರುದಿನ ಆಹಾರಕ್ಕಾಗುವಾಗ ಒಟ್ಟಾಗಿ ಬಿಡ್ತಾರೆ ಇದನ್ನು ನೋಡಿದ ಶಿವಪ್ಪ ಬೆಕ್ಕಿನ ಒಳ್ಳೆಯ ಗುಣದ ಬಗ್ಗೆ ಹಲವು ಜನರ ಬಳಿ ಹೇಳಿಕೊಂಡಿದ್ದ, ಇದು ನಮ್ಮ ನಡುವೆ ಇರಬೇಕು ಅಂತ ಭಾಷಣವೂ ಮಾಡಿದ್ದ. ಆದರೆ ತನ್ನ ಜೊತೆಗೆ ಬೆಳೆದ ಸ್ವಂತ ತಮ್ಮನನ್ನ ಮನೆಯಿಂದ ಹೊರಗೆ ಹಾಕಿ ತಾನೊಬ್ಬನೇ ಅಪ್ಪನ ಆಸ್ತಿಯನ್ನು ಅನುಭವಿಸುತ್ತಿದ್ದಾನೆ ಅವನ ತಮ್ಮ ಬಿಡಿಗಾಸು ಸಿಗದೇ ಕೂಲಿ ಕೆಲಸ ಮಾಡಿಕೊಂಡು ಎಲ್ಲೋ ದೇವಸ್ಥಾನದಲ್ಲಿ ಮಲಗುತ್ತಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ