ಸ್ಟೇಟಸ್ ಕತೆಗಳು (ಭಾಗ ೧೩೫೮) - ಇಬ್ಬರೂ

ಮನಸ್ಸಿನ ಕೋಣೆಯೊಳಗೆ ಜಗಳ ಆರಂಭವಾಗಿದೆ. ಇದು ಈ ದಿನದ ಜಗಳವಲ್ಲ ಸತತ ಹಲವು ದಿನಗಳಿಂದ ಆ ಜಗಳ ನಡೆಯುತ್ತಲೇ ಇದೆ. ನಾನು ಹಲವು ಬಾರಿ ಮಧ್ಯಪ್ರವೇಶ ಮಾಡಿ ರಾಜಿ ಮಾಡುವುದಕ್ಕೆ ಪ್ರಯತ್ನ ಪಟ್ಟರು ಕೂಡ ಅದು ಸಾಧ್ಯವಾಗಲೇ ಇಲ್ಲ .ಇಬ್ಬರಿಗೂ ಒಟ್ಟಾಗಿ ಬದುಕಿ ಅಂತ ಹೇಳುವುದಕ್ಕೆ ಸಾಧ್ಯವೇ ಆಗ್ತಾ ಇಲ್ಲ. ಅವರಿಬ್ಬರಲ್ಲಿ ಒಬ್ಬರಿಗೆ ಮಾತ್ರ ಆ ಮನೆಯೊಳಗೆ ಜಾಗವಿದೆ. ಒಬ್ಬರು ಬದುಕಿದರೆ ಇನ್ನೊಬ್ಬರು ಆ ಮನೆಯನ್ನು ಬಿಟ್ಟು ಹೊರಡಲೇಬೇಕು .ಹಾಗಾಗಿ ಈ ಜಗಳ ಕೋರ್ಟು ಮೆಟ್ಟಿಲೇರಿದೆ. ಇಬ್ಬರೂ ಆ ಜಾಗ ತಮ್ಮದೆಂಬಂತೆ ವಾದ ಮಾಡ್ತಾ ಇದ್ದಾರೆ. ವಕೀಲರು ಇಬ್ಬರ ಮಾತನ್ನು ಕೇಳಿ ಚಿಂತೆ ಮತ್ತು ಭರವಸೆ ನೀವಿಬ್ಬರೂ ಒಬ್ಬ ವ್ಯಕ್ತಿಯನ್ನು ಎತ್ತರ ಕೊಯ್ಯುತ್ತೀರಿ ಹೊತ್ತು ಕೆಳಗೆ ಹಾಕ್ತೀರಿ. ಆ ಕಾರಣಕ್ಕೆ ಇಬ್ಬರೂ ಒಂದೇ ದೋಣಿಯಲ್ಲಿ ಚಲಿಸುವುದಕ್ಕೆ ಸಾಧ್ಯವಿಲ್ಲ. ನಿಮ್ಮಿಬ್ಬರ ಒಳಗೆ ಜಗಳ ಬೇಡ. ನಿಮ್ಮನ್ನ ಹೊತ್ತುಕೊಂಡಿರುವ ಮನುಷ್ಯನಿದ್ದಾನಲ್ಲ ಅವನೇ ನಿರ್ಧರಿಸಲಿ. ಅವನ ಮನಸಿನ ಮನೆಯೊಳಗೆ ಯಾರು ವಾಸಿಸಲಿ ಅಂತ. ಅವನ ನಿರ್ಧಾರದ ಪ್ರಕಾರ ನಿಮ್ಮಿಬ್ಬರಿಗೂ ಅವಕಾಶಗಳು ಖಂಡಿತ ಸಿಗ್ತವೆ. ಒಬ್ಬನೇ ಹೆಚ್ಚು ಸಮಯ ಇಲ್ಲಿ ಬದುಕುವುದಕ್ಕೆ ಸಾಧ್ಯವಾಗುವುದಿಲ್ಲ .ಆಗಾಗ ಸ್ಥಾನಪಲ್ಲಟಗಳು ನಡಿತಾ ಇರ್ತವೆ ಹಾಗಾಗಿ ಜಗಳ ಮಾಡಬೇಡಿ ಮನುಷ್ಯ ನಿಮ್ಮಿಬ್ಬರಿಗೂ ಸಮಾನವಾದ ಅವಕಾಶ ಕೊಡುತ್ತಾನೆ. ಚಿಂತೆ ಮತ್ತು ಭರವಸೆಗೆ ನೆಮ್ಮದಿಯಾಯ್ತು ಅವು ಜಗಳವಾಡದೆ ಅಲ್ಲಿಂದ ಹೊರಟು ಹೋದವು.ಈಗ ಮನುಷ್ಯ ನಿರ್ಧರಿಸಬೇಕಾಗಿದೆ ತನ್ನ ಮನಸ್ಸಿನ ಮನೆಯೊಳಗೆ ಇಬ್ಬರಲ್ಲಿ ಯಾರಿಗೆ ಅವಕಾಶ ನೀಡಬೇಕು ಅಂತ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ