ಸ್ಟೇಟಸ್ ಕತೆಗಳು (ಭಾಗ ೧೩೫೯) - ಕೇಳಿ

ಅಪ್ಪ ಅಮ್ಮ ನೀವಿಬ್ಬರೂ ಯಾಕೆ ನನ್ನನ್ನ ಇನ್ನೊಬ್ಬರ ಹಾಗೆ ಇರೋದ್ದಕ್ಕೆ ಬಯಸ್ತೀರಾ? ನಾನು ನಾನಾಗಿರೋದು ಯಾವಾಗ? ಅಂಕ ತೆಗೆಯುವುದಕ್ಕೆ ವೇದಿಕೆಯ ಮೇಲೆ ನಿಂತು ಮಿಂಚುವುದಕ್ಕೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನ ಮನೆಗೆ ತರುವುದಕ್ಕೆ ಹೀಗೆ ನಿಮ್ಮ ಪಟ್ಟಿಗಳು ಬೆಳೀತಾನೆ ಹೋಗ್ತಾ ಇವೆ. ಎಲ್ಲವನ್ನು ನನ್ನೊಬ್ಬನಿಂದ ಮಾಡಿಸುವುದಕ್ಕೆ ಪ್ರಯತ್ನ ಯಾಕೆ? ನೀವು ನನ್ನ ಜೀವನದ ಒಂದನೇ ಪುಟವನ್ನ ಇನ್ಯಾರದೋ ಜೀವನದ ಹತ್ತನೇ ಪುಟಕ್ಕೆ ಹೋಲಿಸಿಕೊಂಡು ನಾನು ಅವನಂತಾಗಲಿಲ್ಲ ಅವಳಂತಾಗಲಿಲ್ಲ ಎಂದು ಪ್ರತಿದಿನ ಹೇಳುತ್ತಾ ಹೋದರೆ ನನ್ನ ಆತ್ಮಸ್ಥೈರ್ಯ ಹಿಗ್ಗುವುದು ಯಾವಾಗ? ಯಾವಾಗ ನಿಮ್ಮ ನಿರೀಕ್ಷೆಗಳನ್ನು ನನ್ನಿಂದ ಸಾಧ್ಯವಾಗಿಸಲಾಗಲಿಲ್ಲ ಅನ್ನುವ ನೋವು, ಪ್ರತಿದಿನ ಕಾಡ್ತಾ ಇದೆ. ಬದುಕು ಬೇಡ ಅನಿಸಿದೆ ಏನು ಮಾಡೋಕ್ಕಾಗದೆ ಇರೋದು ಯಾಕೆ? ಇದರಿಂದ ಸಾಯುವುದೇ ಒಳಿತು ಅನ್ನಿಸಿದೆ ದಯವಿಟ್ಟು ಒಮ್ಮೆ ನನ್ನ ಆಸಕ್ತಿಯನ್ನು ನನ್ನ ಮಾತನ್ನ ಒಂದು ಸಲ ಪಕ್ಕದಲ್ಲಿ ಕುಳಿತು ಕೇಳಿಬಿಡಿ. ನಾನು ಖಂಡಿತ ನಿಮ್ಮ ಹೆಸರನ್ನ ಹಾಳು ಮಾಡುವುದಿಲ್ಲ ಎಲ್ಲರಿಗಿಂತ ಹೆಚ್ಚು ಸಾಧನೆ ಮಾಡ್ತೇನೆ. ಪ್ರಸಿದ್ಧನಾಗ್ತಾನೆ. ನಾನು ನಾನಾಗಿರುತ್ತೇನೆ ಒಂದು ಅವಕಾಶ ಮಾಡಿಕೊಡಿ. ಹೀಗೆ ಬರೆದ ಪತ್ರವೊಂದು ರಾಜವಿನ ಪುಸ್ತಕದ ಮಧ್ಯದಲ್ಲಿ ಅವರ ತರಗತಿಯ ಟೀಚರ್ ಗೆ ದೊರಕಿಬಿಟ್ಟಿತು ಅದನ್ನು ನೋಡಿ ಅವರು ಮೌನವಾದರು. ರಾಜುವಿನ ಮನೆಯಲ್ಲಿ ಮೊಬೈಲ್ ರಿಂಗಾಯಿತು.
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ