ಸ್ಟೇಟಸ್ ಕತೆಗಳು (ಭಾಗ ೧೩೬೫) - ಮೀನು

ಸ್ಟೇಟಸ್ ಕತೆಗಳು (ಭಾಗ ೧೩೬೫) - ಮೀನು

ಅಮ್ಮ ಬದುಕಿಗೆ ಅರ್ಥವೇನು? ಹುಟ್ಟುತ್ತೇವೆ ಸ್ವಚ್ಛಂದವಾಗಿ ಜೀವಿಸ್ತೇವೆ. ಕೆಲವು ದಿನಗಳಲ್ಲಿ ಮಾಯವಾಗಿ ಬಿಡುತ್ತೇವೆ. ಹಾಗೆಯೇ ನಾನು ನನ್ನ ಗೆಳೆಯರನ್ನ ಗುರುಗಳನ್ನ ಸಂಬಂಧಿಕರನ್ನ ಆತ್ಮೀಯರನ್ನ ಅಕ್ಕಪಕ್ಕದ ಮನೆಯವರನ್ನ ಹೀಗೆ ಹಲವು ಜನರನ್ನ ಕಳೆದುಕೊಂಡಿದ್ದೇನೆ. ಅವರ್ಯಾರು ನನಗೆ ಕಾಣ್ತಾನೆ ಇಲ್ಲ. ಇತ್ತೀಚಿಗೆ ನೀರಿನೊಳಗೆ ಆಟವಾಡುತ್ತಿದ್ದ  ನಮ್ಮ ಪಕ್ಕದಲ್ಲಿ ಹಾದು ಹೋಗಿ ದೈತ್ಯ ಆಕಾರವೊಂದು ನನ್ನ ಆತ್ಮೀಯರನ್ನ ಎಳೆದುಕೊಂಡು ಬಿಟ್ಟಿತ್ತು. ಅದೇನು ಯಾಕೆ ಬಂದಿದ್ಯೋ ಗೊತ್ತಿಲ್ಲ. ನನ್ನನ್ನ ಅವರು ಅಷ್ಟಾಗಿ ಗಮನವೇ ತೆಗೆದುಕೊಂಡಿಲ್ಲ ಯಾಕೆ? ನನ್ನ ಮೇಲಿನ ಭಯವೇ?

ಇಲ್ಲ ಮಗು, ಅದು ಭಯವಲ್ಲ. ನಿನ್ನನ್ನ ಪಡೆದುಕೊಂಡು ಹೋದರೆ ನಿನ್ನಿಂದ ಅವರಿಗೆ ಲಾಭವೇನ್ನೂ ಸಿಗುವುದಿಲ್ಲ. ಲಾಭವಿಲ್ಲದೆ ಆ ಮನುಷ್ಯರು ಏನು ಮಾಡುವುದಿಲ್ಲ. ನಿನ್ನ ದೇಹ ಒಂದಷ್ಟು ಪೌಷ್ಟಿಕವಾಗಿ ಬೆಳೆದು ನಿಂತಾಗ ನಿನ್ನನ್ನು ಎಳೆದುಕೊಳ್ಳುತ್ತಾರೆ. ನಾವು ಇಲ್ಲಿ ಬದುಕಿಗೆ ಅರ್ಥ ಹುಡುಕಿ ಪ್ರಯೋಜನವಿಲ್ಲ. ಹುಟ್ಟಿದ್ದೇವೆ ಅವರ ದುರಾಸೆಗೆ ನಾವು ಒಂದು  ದಿನ ಖಂಡಿತ ಬಲಿಯಾಗುತ್ತೇವೆ. ನಾವು ಅಲ್ಲಿ ಯಾವ್ಯಾವ ರೂಪದಲ್ಲಿ ಯಾವ ಯಾವ ಸ್ಥಿತಿಯಲ್ಲಿ ಇರುತ್ತೇವೋ ಗೊತ್ತಿಲ್ಲ ಯಾರ್ಯಾರ ಮನೆಗೆ ತಲುಪುತ್ತೇವೋ ಅರಿವಿಲ್ಲ. ಒಟ್ಟಿನಲ್ಲಿ ನಮ್ಮದೊಂದು ಅತಂತ್ರ ಬದುಕು, ಇದನ್ನ ಯೋಚಿಸಿ ಪ್ರಯೋಜನ ಇಲ್ಲ ಈ ದಿನವನ್ನು ಇದ್ದುಬಿಡಬೇಕು. ಮುಂದಿನದು ಆ ಭಗವಂತ ನೀಡುತ್ತಾನೆ. ಅಮ್ಮ ಮೀನು ಮಗು ಮೀನುವಿಗೆ ಹೇಳುತ್ತಿತ್ತು.

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ