ಸ್ಟೇಟಸ್ ಕತೆಗಳು (ಭಾಗ ೧೩೬೬) - ಹೊಸ್ತಿಲು

ಹೊಸ್ತಿಲಲ್ಲಿ ನಿಂತ ವಯಸ್ಸಾದ ಕಣ್ಣುಗಳು ಸುತ್ತ ಹೋಗುವ ಬದುಕನ್ನ ಗಮನಿಸುತ್ತಿದೆ. ಹಲವು ವರ್ಷಗಳಿಂದ ಆ ಬಾಗಿಲ ಒಳಗಿಂದ ಮಾತ್ರ ಜಗತ್ತನ್ನ ಕಾಣುತ್ತಿರುವ ಆ ವಯಸ್ಸಾದ ದೇಹಕ್ಕೆ ಜೊತೆಗಾರರು ಯಾರು ಇಲ್ಲದಾಗಿದೆ. ತುಂಬಾ ಪ್ರೀತಿಯಿಂದ ಶಿಕ್ಷಣ ಪಡೆದ ಮಕ್ಕಳು ಅವರವರ ಜೀವನ ಕಟ್ಟಿಕೊಂಡಿದ್ದಾರೆ. ಸಪ್ತಪದಿ ತುಳಿದ ಮುದ್ದಿನ ಗಂಡ ಉಸಿರು ನಿಲ್ಲಿಸಿದ್ದಾನೆ. ಆಗಾಗ ಊಟ ಕೊಡುವುದಕ್ಕೆ ಮನೆ ಕೆಲಸ ಮಾಡೋದಕ್ಕೆ ಕೆಲಸದವರು ಬಂದು ಹೋಗ್ತಾರೆ. ತಿಂಗಳಿಗೆ ಇಂತಿಷ್ಟು ಸಂಬಳ ತಗೋತಾರೆ .ದಾರಿಯಲ್ಲಿ ಹೋಗಿ ಬರುವ ಪುಟ್ಟ ಮಕ್ಕಳ ನೋಡಿ ಮೊಮ್ಮಕ್ಕಳ ಆಸೆ ಬರುತ್ತಿದೆ. ದೊಡ್ಡವರು ಯಾರಾದರೂ ಹಿರಿಯರನ್ನ ಕರೆದುಕೊಂಡು ಹೋಗುವಾಗ ತನ್ನ ಮಕ್ಕಳು ಹೀಗಿರಬಾರದಿತ್ತಾ ಎಂದು ನೆನೆಪಾಗುತ್ತಿದೆ. ಆದರೂ ದಾರಿಹೋಕರನ್ನ ಪಕ್ಕದಲ್ಲಿ ಕುಳ್ಳಿರಿಸಿ ಬಂದಷ್ಟು ಬದುಕಿನ ಕುರಿತು ಮಾತನಾಡುತ್ತಾರೆ ದಿನವೂ ಕಣ್ಣೀರಿಡುತ್ತಾ ಮಕ್ಕಳಿಗೆ ಒಳ್ಳೆಯದಾಗಲಿ ಅಂತ ಬಯಸುತ್ತಾರೆ. ಅವರ ಬದುಕಿನಲ್ಲಿ ಒಳ್ಳೆಯ ದಿನ ಬರುವ ಯಾವ ಸೂಚನೆಯೂ ಕಾಣುತ್ತಿಲ್ಲ. ಈಗ ಮತ್ತೆ ಹೊಸ ಬದುಕಿನ ನಿರೀಕ್ಷೆಯಲ್ಲಿ ನಿಂತು ಕಾಯುತ್ತಿದ್ದಾರೆ ದೇಹ ಸ್ಮಶಾನದ ಕಡೆಗೆ ಹೋಗುವುದಕ್ಕೆ ದಿನವನ್ನು ಎಣಿಸುತ್ತಿದೆ.
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ