ಸ್ಟೇಟಸ್ ಕತೆಗಳು (ಭಾಗ ೧೩೬೮) - ಗೊತ್ತಾಯ್ತಾ?

ಅಕ್ಕ ಮನೆಯಲ್ಲಿಲ್ಲ. ಎರಡು ದಿನದ ಹಿಂದೆ ಅಮ್ಮ ಅಜ್ಜಿ ಮನೆಗೆ ಹೋಗಿ ಬಿಟ್ಟು ಬಂದಿದ್ರು. ಯಾಕೆ ಅಂತ ಕೇಳಿದ್ದಕ್ಕೆ ಮೌನವಾಗಿ ಅಳುವುದನ್ನು ಬಿಟ್ಟು ಬೇರೆ ಏನು ಮಾಡುತ್ತಾ ಇಲ್ಲ. ನನ್ನ ಜೊತೆ ಪ್ರತಿದಿನ ಆಟ ಆಡ್ತಾ ಮಾತಾಡ್ತಿದ್ದ ಅಕ್ಕ ಒಂದು ವಾರದಿಂದ ಕೋಣೆ ಒಳಗೆ ಕುಳಿತು ಬಿಟ್ಟಿದ್ಲು. ನಿಮಗೆ ಹೇಳುವುದಕ್ಕೂ ಮರೆತಿದ್ದೆ. ನಮ್ಮೂರಿನ ಕೊನೆಯ ತಿರುವಿನ ಬಳಿ ಇರುವ ಸಣ್ಣ ಹೊಂಡ ಒಂದರಲ್ಲಿ ನಮ್ಮ ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ ಅಣ್ಣನ ಹೆಣ ಬಿದ್ದಿತ್ತಂತೆ, ಯಾರೋ ಹೊಡೆದು ಹಾಕಿದ್ರಂತೆ, ಅವರು ಹತ್ತಿರ ಬರುವಾಗ ತುಂಬಾ ಹೆದರಿಕೆ ಆಗ್ತಾ ಇತ್ತು. ಮೈಯನ್ನು ಒಂಥರಾ ಮುಟ್ಟಿ ಮಾತನಾಡಿಸುತ್ತಿದ್ದರು ನನಗೆ ಇಷ್ಟನೇ ಆಗ್ತಾ ಇರ್ಲಿಲ್ಲ. ಅಕ್ಕನನ್ನ ಯಾಕೆ ಅಮ್ಮ ಅಜ್ಜಿ ಮನೆಯಲ್ಲಿ ಬಿಟ್ಟಿದ್ದು ಅನ್ನೋದು ಇನ್ನೂ ಗೊತ್ತಾಗಲಿಲ್ಲ. ನಮ್ಮ ಮನೆಗೆ ಎರಡು ಸಲ ಪೊಲೀಸ್ ಗಾಡಿ ಬಂದು ಹೋಗಿತ್ತು. ಮನೆಯಲ್ಲಿ ಯಾವುದು ಮೊದಲಿನಂತಿಲ್ಲ. ಏನೋ ಬದಲಾಗಿದೆ. ಏನು ಅನ್ನೋದು ಯಾರೂ ಮಾತನಾಡುತ್ತಿಲ್ಲ. ನನಗಂತೂ ಏನು ಅರ್ಥ ಆಗ್ತಾ ಇಲ್ಲ ನಿಮಗೇನಾದರೂ ಗೊತ್ತಾಯ್ತಾ?
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ