ಸ್ಟೇಟಸ್ ಕತೆಗಳು (ಭಾಗ ೧೩೭೪) - ಇರುವೆ

ಸ್ಟೇಟಸ್ ಕತೆಗಳು (ಭಾಗ ೧೩೭೪) - ಇರುವೆ

ದಾರಿ ತೋರಿಸಿದವರಾರು? ಇದನ್ನು ನಾನು ತಿಳಿದುಕೊಳ್ಳಲೇಬೇಕು. ಯಾಕೆಂದರೆ ನನ್ನ ಮನೆಯ ಒಳಗೆ ನನ್ನ ಅನುಮತಿ ಇಲ್ಲದೆ ಪ್ರವೇಶಿಸುವುದಕ್ಕೆ ಧೈರ್ಯವಾದರೂ ಹೇಗೆ ಬಂತು? ಅದಲ್ಲದೆ ನಾನು ಅವರನ್ನು ನನ್ನ ಮನೆಯೊಳಕ್ಕೆ ಬರುವುದಕ್ಕೆ  ಕರೆದೂ ಇಲ್ಲ. ಆದರೂ ಮನೆಯೊಳಕ್ಕೆ ಬಂದು ಅವರದೇ ಮನೆ ಎಂಬಂತೆ ಬದುಕುವ ರೀತಿ ನನಗೆ ಇಷ್ಟವಾಗುತ್ತಿಲ್ಲ. ಅವರೀಗ ನಮ್ಮ ಮನೆಯವರಾಗಿ ಬಿಟ್ಟಿದ್ದಾರೆ. ಮೊದಲು ಅವರು ನಮ್ಮ ಮನೆಯೊಳಗೆ ಕಾಲಿಟ್ಟಿರಲಿಲ್ಲ. ದಿನ ಒಬ್ಬರೋ ಇಬ್ಬರೋ ಹಾಗೆ ಬಂದು ಹೋಗ್ತಾ ಇದ್ದವರು ದಿನ ಕಳೆದಂತೆ ತಮ್ಮವರಿ ಒಬ್ಬರೊಬ್ಬರನ್ನೇ ಸೇರಿಸುತ್ತಾ ಈಗ ಅವರ ಇಡೀ ಜನಾಂಗವೇ ಇಲ್ಲಿ ಬಂದು ಬದುಕುವುದಕ್ಕೆ ಆರಂಭವಾಗಿದೆ. ಆದರೆ ಕಣ್ಣಿಗೆ ಎಲ್ಲೂ ಕಾಣಿಸೋದೆ ಇಲ್ಲ. ನಿಗೂಢವಾಗಿ ಬದುಕ್ತಾ ಇರ್ತಾರೆ. ಎಲ್ಲಿಯಾದರೂ ಸಣ್ಣ ತಿಂಡಿಯ ಚೂರು ಸಿಹಿಯ ತುಣುಕುಗಳು ಕಂಡ್ರೆ ಸಾಕು ಒಮ್ಮೆಲೆ ಬಂದು ಮುತ್ತಿಕೊಳ್ಳುತ್ತಾರೆ .ಅವರು ಬರುವ ದಾರಿಯನ್ನು ಯಾವ ದಾರಿಯಲ್ಲಿ ಆಗಮಿಸಬಹುದು ಅನ್ನುವ ಸೂಚನೆಯೂ ನನಗೆ ಸಿಗೋದಿಲ್ಲ .ಅವರು ಬರುತ್ತಿದ್ದ ಎಲ್ಲ ದಾರಿಗಳನ್ನ ಮುಚ್ಚಿದರೂ ಸಹ ದಾರಿಯನ್ನು ಹುಡುಕಿ ಬರುತ್ತಾರೆ. ಅವರನ್ನು ಮನೆ ಒಳಗೆ ಬರದಂತೆ ತಡೆಯುವ ಶಕ್ತಿ ನನ್ನಲ್ಲಿಲ್ಲ. ಇರುವೆ ನಿನ್ನ ಇರುವನ್ನು ಅರಿಯದಾದೆ. ಅಷ್ಟು ಚಾಲಾಕಿತನವನ್ನು ಎಲ್ಲಿಟ್ಟಿರುವೆ ಬರುವ ದಾರಿಯನ್ನ ನಿನ್ನ ಬಳಗಕ್ಕೆ ಹೇಗೆ ತಿಳಿಸಿರುವೆ?

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ