ಸ್ಟೇಟಸ್ ಕತೆಗಳು (ಭಾಗ ೧೩೭೫) - ನಂಬಿಕೆ

ಆತನ ಗೆಲುವಿನ ನಿರೀಕ್ಷೆ ಅದ್ಭುತವಾಗಿತ್ತು. ಆತನಿಗೆ ನೂರು ಪ್ರತಿಶತಃ ಗೆಲುವಿನ ನಂಬಿಕೆ ಇತ್ತು. ನಗರಸಭಾ ಸದಸ್ಯನಾಗುವುದು ಅಷ್ಟು ಸುಲಭದ ಮಾತೇನಲ್ಲ, ಪರಿಚಯವಿಲ್ಲದ ಊರಿನಲ್ಲಿ ಒಂದು ವರ್ಷಗಳ ಕಾಲ ಅವಿರತವಾಗಿ ಶ್ರಮವಹಿಸಿ ದುಡಿದ. ಎಲ್ಲರ ಮನೆ ಮಗನಾದ. ಚುನಾವಣೆ ಪ್ರಚಾರಕ್ಕೆ ಪ್ರತಿಮನೆಯ ಕದ ತಟ್ಟಿದ. ಈಗಾಗಲೇ ಅವರ ಹೃದಯ ಮುಟ್ಟಿದ ಕಾರಣ ಅದೇನು ಕಷ್ಟ ಅನ್ನಿಸಲೇ ಇಲ್ಲ. ಚುನಾವಣೆ ಪಲಿತಾಂಶದ ಹಿಂದಿನ ದಿನವೇ ತನ್ನ ಗೆಲುವಿನ ಪತಾಕೆಗಳನ್ನ, ಭಾವಚಿತ್ರಗಳ ದೊಡ್ಡ ದೊಡ್ಡ ಫಲಕಗಳನ್ನ ಗೆಲುವಿನ ಸಂಭ್ರಮ ಹೆಚ್ಚಿಸುವ ಧ್ವನಿವರ್ಧಕಗಳನ್ನ ಜೋಡಿಸಿದ. ಎಲ್ಲರೂ ಆತನ ಅಹಂಕಾರಕ್ಕೆ, ಗೆಲುವಿನ ಅಮಲಿಗೆ ಉಗಿಯುವವರೇ, ಆದರೆ ಆತನಿಗೆ ಚೆನ್ನಾಗಿ ಅರಿವಿತ್ತು, ಶ್ರಮದ ದುಡಿಮೆಗೆ ಗೆಲುವು ಖಂಡಿತಾ ಸಿಗುತ್ತದೆ. ಹಾಗಾಗಿ ಆತ ಸಂಭ್ರಮಾಚರಣೆಗೆ ತಯಾರಾಗಿದ್ದ. ಊರು ಕಾಯುತ್ತಿತ್ತು, ಆತ ಸಿದ್ದನಾಗಿದ್ದ. ಗೆಲುವು ಒಲಿದು ಬಂತು. ಹಲವರ ಬಾಯಿ ಮುಚ್ಚಿಹೋಯಿತು.
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ