ಸ್ಟೇಟಸ್ ಕತೆಗಳು (ಭಾಗ ೧೩೭೬) - ಕೂಗು

ಸ್ಟೇಟಸ್ ಕತೆಗಳು (ಭಾಗ ೧೩೭೬) - ಕೂಗು

ಊರಿನ ಕೊನೆಯಲ್ಲಿ ಒಂದು ಗ್ರಾಮ ಪಂಚಾಯಿತಿ ಇದೆ. ಅದಕ್ಕೆ ಹೊಂದಿಕೊಂಡು ಗ್ರಂಥಾಲಯ ಒಂದು ಹಿಂದೆ ಇತ್ತಂತೆ. ಈಗ ಅಲ್ಲಿ ಗ್ರಂಥಾಲಯದ ಯಾವ ಸುಳಿವು ಕಾಣುತ್ತಿಲ್ಲ. ಗೋಡೆಗಳಷ್ಟೇ ಉಳಿದಿವೆ. ಚಾವಣಿಗಳು ಮಾಯವಾಗಿವೆ. ಪುಸ್ತಕಗಳು ದೂಳು ಹಿಡಿದು ಕರಗಿ ಹೋಗಿದೆಯೋ, ಓದುವವರಿಲ್ಲದೆ ಆ ಜಾಗಕ್ಕೆ ಬಂದೇ ಇಲ್ಲವೋ ಗೊತ್ತಿಲ್ಲ. ಆ ಊರಿನಲ್ಲಿ ಯಾವ ಮನೆಯಲ್ಲೂ ಪುಸ್ತಕಗಳು ಸಿಗುತ್ತಿಲ್ಲ. ಓದುವ ಹವ್ಯಾಸ ಒಬ್ಬರಿಗೂ ಇಲ್ಲ. ಪುಸ್ತಕದ ಮನೆಯೊಂದನ್ನು ಕಟ್ಟಬೇಕು ಅಂತ ಅವನೊಬ್ಬ ತಿಂಗಳುಗಳಿಂದ ಓಡಾಡುತ್ತಿದ್ದಾನೆ. ಯಾರೊಬ್ಬರೂ ಸಹಕಾರ ನೀಡುತ್ತಿಲ್ಲ. ಎಲ್ಲರೂ ನಕ್ಕು ಮುಂದುವರೆಯುತ್ತಿದ್ದಾರೆ. ಅದೇ ಊರಿನಲ್ಲಿ ದೇಹ ಸದೃಢವಾಗಿ ಕಾಣುವುದಕ್ಕೆ ಹತ್ತಾರು ವಿವಿಧ ರೀತಿಯ ವ್ಯಾಯಾಮ ಶಾಲೆಗಳಿವೆ. ಅವುಗಳಿಗೆ ಬೆಳಗ್ಗೆ ಸಂಜೆ ಹೊತ್ತಿನಲ್ಲಿ ದುಡ್ಡು ಕೊಟ್ಟು ಜನ ಹೋಗ್ತಾರೆ. ಅದ್ಭುತವಾಗಿ ಕಾಣಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ತಲೆಯೊಳಗೆ ಈ ನೆಲದ ಈ ಬದುಕಿನ ಆಲೋಚನೆಗಳನ್ನ ತುಂಬುವ ಹೊಸ ಆಲೋಚನೆಗಳನ್ನ ಸೃಷ್ಟಿಸುವ ಮೌಲ್ಯಯುತ ಪುಸ್ತಕಗಳನ್ನ ಓದಿಸುವುದಕ್ಕಾಗುತ್ತಿಲ್ಲವಲ್ಲ ಅನ್ನೋದು ಅವನ ನೋವು. ಹೀಗೆ ಮುಂದುವರೆದು ಬಿಟ್ಟರೆ ಊರಿನ ತುಂಬೆಲ್ಲ ಈ ದೇಹವನ್ನು ಗಟ್ಟಿಗೊಳಿಸಿದವರು ಸಿಗುತ್ತಾರೆ ವಿನಃ ಗಟ್ಟಿ ದನಿಯಲ್ಲಿ ತಿಳಿದದ್ದನ್ನು ತಿಳಿಸುವವರು ಸಿಗದೇ ಹೋದರೆ ಮುಂದೇನು ಅನ್ನೋದವನಿಗೆ ಯೋಚನೆ .ಆತನ ಕೂಗು ಕೂಗಾಗಿಯೇ ಉಳಿದಿದೆ ವಿನಹ ಯಾರೊಬ್ಬರೂ ಕೇಳುತ್ತಿಲ್ಲ

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ