ಸ್ಟೇಟಸ್ ಕತೆಗಳು (ಭಾಗ ೧೩೮೩) - ಕಾಯಬೇಕು

ಸ್ಟೇಟಸ್ ಕತೆಗಳು (ಭಾಗ ೧೩೮೩) - ಕಾಯಬೇಕು

ಭಗವಂತನ ಬಳಿ ಕೋಪಿಸಿಕೊಂಡಿದ್ದಾಳೆ. ನೀನು ಹೀಗೆ ಮಾಡಬಾರದಿತ್ತು, ಇಷ್ಟು ದಿನ ನಿನಗೆ ಕೈ ಮುಗಿದು ಪ್ರಾರ್ಥಿಸಿದ್ದಕ್ಕೆ ನೀನು ಕೊಟ್ಟ ಪ್ರತಿಫಲ ಇದೇನಾ? ಆಕೆ ಆತನನ್ನ ಮನಸಾರೆ ಇಷ್ಟಪಟ್ಟಿದ್ದಳು ಅವನೂ ಕೂಡ ಅಂತ ಅವಳಂದು ಕೊಂಡಿದ್ದಳು. ಆದರೆ ಕೆಲವು ಸಮಯಗಳು ಕಳೆದ ನಂತರ ಆತ ಆಕೆಯಿಂದ ದೂರವಾಗುವ ನಿರ್ಧಾರ ಕೈಗೊಂಡ. ಆಕೆ ಬೇಡಿಕೊಂಡರೂ ಆತ ಒಪ್ಪಿಕೊಳ್ಳಲೇ ಇಲ್ಲ. ತನ್ನ ಬೆಳವಣಿಗೆಗೆ ನೀನು‌ ತೊಂದರೆ ಅನ್ನೋದು ಅವನ ವಾದ.  ಆ ನೋವಿನಿಂದ ಹೊರಬರುವುದಕ್ಕೆ ಹಲವು ತಿಂಗಳುಗಳ ಕಾಲ ಆಕೆ ಶ್ರಮಪಟ್ಟಳು, ಭಗವಂತನಿಗೆ ದಿನವೂ ಹಿಡಿ‌ಶಾಪ ಹಾಕುತ್ತಿದ್ದಳು. ಭಗವಂತನ ಮೇಲೆ ಆಸೆ ಕಡಿಮೆಯಾಗಿ ಹೋಯಿತ. ದಿನಗಳು ಉರುಳುತ್ತಾ ಹೋದವು ಮುಂದೊಂದು ದಿನ ಆಕೆಯ ಬಾಳಲ್ಲಿ ಬದುಕು ರೂಪಿಸುವಂತವನ ಪ್ರವೇಶವಾಯಿತು. ಆಕೆಯ ಜೀವನ ಕನಸಿಗಿಂತ ವಿಭಿನ್ನವಾಗಿ ಸಾಗತೊಡಗಿತು. ನೆಮ್ಮದಿ ಜೊತೆಯಾಯಿತು. ಕೆಲವು ಸಮಯದ ನಂತರ ಆಕೆಗೊಂದು ಸುದ್ದಿ ತಿಳಿಯಿತು. ಆಕೆಯನ್ನ ತೊರೆದು ಹೋಗಿದ್ದವ ಬದುಕಿಗೆ ಮೋಸ‌ ಮಾಡಿದ್ದ .ಜೀವನದಲ್ಲಿ ಸೋತಿದ್ದ ,ಸಮಾಜಕ್ಕೆ ಮುಖ ತೋರಿಸಲಾಗದೆ ಊರು ಬಿಟ್ಟಿದ್ದ ,ಎಲ್ಲವನ್ನು ಕಳೆದುಕೊಂಡು ನಿರ್ಗತಿತನಾಗಿದ್ದ. ಆ ದಿನವೇ ಮನೆಯ ಭಗವಂತನ ಮುಂದೆ ಕೈಮುಗಿದು ನಿಂತು ದೇವರ ಹಾರೈಕೆಯನ್ನು ಕೊಂಡಾಡಿದಳು. ನೀನಂದು ಮಾಡಿದ ಉಪಕಾರ ನನಗೆ ಅರ್ಥವಾಗಲಿಲ್ಲ ಅಂದುಕೊಂಡಳು. ಭಗವಂತ ಸುಮ್ಮನೆ ನಕ್ಕು ಆಶೀರ್ವಾದ ಮಾಡಿದನಷ್ಟೇ. ಎಲ್ಲವೂ ಒಳಿತಗಾಗಿಯೇ ಆಗುತ್ತದೆ ಕಾಯಬೇಕಷ್ಟೇ

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ