ಸ್ಟೇಟಸ್ ಕತೆಗಳು (ಭಾಗ ೧೩೮೬) - ಮನೆಗೆ ಮಸಣ

ಮಸಣವು ನಗುತಿದೆ, ಜೋರಾಗಿ ಇನ್ನೂ ಜೋರಾಗಿ, ನನ್ನನ್ನ ಊರ ಹೊರಗೆ ಕಳುಹಿಸಿದ್ದಿ, ನನಗೆ ಗೌರವ ಇಲ್ಲದ ಹಾಗೆ ಮಾಡಿದ್ದಿ, ನಿನ್ನ ಉಪಯೋಗದ ಸಂಧರ್ಭ ಮಾತ್ರ ಉಪಯೋಗಿಸಿದ್ದಿ ಮತ್ತೆ ನನ್ನನ್ನ ಮರೆತು ಬಿಟ್ಟಿದ್ದಿ. ನಿನಗೆ ಮೋಕ್ಷ ಕರುಣಿಸುವ ನನ್ನ ದೂರ ಇಟ್ಟ ಕಾರಣವೇ ನಾನು ನಿನ್ನ ಮನೆ ಯಂಗಳಕ್ಕೆ ಬಂದು ನಿಂತಿದ್ದೇನೆ. ನೀನು ಹೆಜ್ಜೆ ಹೊರಗಿಟ್ಟರೆ ಸಾಕು ನಿನ್ನ ಸುಟ್ಟು ಬೂದಿಯನ್ನ. ಮನೆಯವರಿಗೆ ದಯಪಾಲಿಸಿ ಹೊರಡುತ್ತೇನೆ. ನಾನೀಗ ಸಂಚಾರ ಆರಂಬಿಸಿದ್ದೇನೆ. ಪ್ರತೀ ಮನೆಯಂಗಳದಿ ನಿಂತು ಜೀವ ತೊರೆದ ದೇಹಗಳ ಸುಟ್ಟು ಹೊರಡುತ್ತೇನೆ. ನಿಮಗ್ಯಾರಿಗೂ ಹೊರುವ ತ್ರಾಸವಿಲ್ಲ. ಎಲ್ಲವೂ ಸುಲಭ ಸಾದ್ಯವಾಗುತ್ತದೆ. ಅನ್ನವೇ ಮನೆಯ ಬಾಗಿಲಿಗೆ ಬಂದು ನಿಂತಿರುವಾಗ ನಾನು ಮಸಣ ನಿನ್ನ ಮನೆಯ ಬಾಗಿಲಿಗೆ ಬಂದದ್ದರಲ್ಲಿ ಏನು ತಪ್ಪು? ಹೊಸದಾಗಿ ಮನೆ ಮನೆಗೆ ತೆರಳಿ ಸುಡುವ ಮಸಣವು ಮಾತನಾಡಿತು. ಬದಲಾವಣೆ ಕಾಲಘಟ್ಟದಲ್ಲಿ ನಾನು ಒಪ್ಪಿಕೊಂಡು ಸುಮ್ಮನಾದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ