ಸ್ಟೇಟಸ್ ಕತೆಗಳು (ಭಾಗ ೧೩೮೭) - ರಾಜಕೀಯ

ಸರ್ ನಮಸ್ತೆ ನಿಮ್ಮ ವ್ಯಾಪ್ತಿಯ ಕೆಲವೊಂದು ಊರುಗಳಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ, ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿಕೊಂಡಿದೆ, ಕರೆಂಟ್ ಸರಿಯಾಗಿ ಬರ್ತಾ ಇಲ್ಲ, ನೆಟ್ವರ್ಕ್ ತೊಂದರೆ ಇದೆ ಹೀಗೆ ಸಮಸ್ಯೆಗಳು ಒಂದಷ್ಟಿದೆ ನೀವು ಇವನ್ನ ಆದಷ್ಟು ಬೇಗ ಪರಿಹಾರ ಮಾಡ್ಲೇಬೇಕು ಸರ್... ಹಲೋ ಸ್ವಾಮಿ ನಾನು ಎಲ್ಲ ಸಮಸ್ಯೆಯನ್ನು ಪರಿಹಾರ ಮಾಡಿಬಿಟ್ಟರೆ ಜನ ನನ್ನ ಮರೆತುಬಿಡುತ್ತಾರೆ,ಇವರಿಗೆ ಕಷ್ಟಕ್ಕಾಗುವಾಗ ನಾವು ಬೇಕು, ಯಾರಾದರೂ ಆರೋಗ್ಯಕ್ಕೆ ಕೆಟ್ಟಾಗ ನಾವು ಹೋಗಿ ಅವರ ಕೈಲೊಂದಿಷ್ಟು ದುಡ್ಡು ಇಟ್ಟು ಫೋಟೋ ತೆಕ್ಕೊಂಡು ವಿಡಿಯೋ ಮಾಡಿ ಒಂದಷ್ಟು ಕಡೆ ಹಂಚಬೇಕು, ಕರೆಂಟು ಹೋದಾಗ ಯಾವುದಾದರೂ ಒಂದು ಕಂಬದ ಸುತ್ತ ಇರುವ ಸಣ್ಣ ಸಣ್ಣ ಗಿಡಗಳನ್ನ ಕತ್ತರಿಸಿ ಹಾಕಿ ನಾವು ಕರೆಂಟ್ ಬರುವುದಕ್ಕೆ ಪ್ರಯತ್ನ ಪಡ್ತಾ ಇದ್ದೀವಿ ಅಂತ ತೋರಿಸಬೇಕು, ಫೋಟೋ ವಿಡಿಯೋ ಕಡ್ಡಾಯ, ರಸ್ತೆಯ ಒಂದೆರಡು ಗುಂಡಿಗಳನ್ನ ಮುಚ್ಚಿಸಿ ನಾವೇ ಹಾರೆ ಹಿಡಿದು ಕೆಲಸ ಮಾಡಿದ ಫೋಟೋ ಕೂಡ ಪತ್ರಿಕೆಯಲ್ಲಿ ಬರಬೇಕು... ಮೊಬೈಲ್ ಅಲ್ಲಿ ನಾವು ಮಾಡುತ್ತಿರುವ ಕೆಲಸಗಳು ವಾರಕ್ಕೊಂದರಂತೆ ಮಾಡಬೇಕಾಗಿರುವ ಪಟ್ಟಿ ಮಾಡಿಟ್ಟುಕೊಂಡಿದ್ದೇನೆ. ಅದನ್ನು ಮುಂದುವರಿಸಬೇಕು... ಹೀಗೆ ಮಾಡಿದರೆ ಮಾತ್ರ ನಾವು ಉಳಿತೇವೆ, ಬೆಳಿತೇವೆ. ನಿನಗೆ ಅದೆಲ್ಲ ಅರ್ಥ ಆಗುವುದಿಲ್ಲ. ನೀನು ಸಮಸ್ಯೆಗಳನ್ನು ಹೇಳಿಕೊಂಡು ಹೋಗ್ತೀಯಾ ಎಲ್ಲಾ ಸಮಸ್ಯೆಗಳಿಗೆ ಮೂಲದಿಂದಲೇ ಪರಿಹಾರ ಸಿಕ್ಕರೆ ನಮ್ಮನ್ನು ಮರೆತು ಬಿಡ್ತಾರೆ. ಅದಕ್ಕೆ ಸಣ್ಣ ಸಣ್ಣ ಪರಿಹಾರ ಮಾತ್ರ ಸಿಗ್ತಾ ಹೋಗಬೇಕು. ಇದು ರಾಜಕೀಯ... ರಾಜಕೀಯ ಮುಖಂಡನ ಮಾತು ಕೇಳಿ ಜೊತೆಗಿದ್ದವ ಮೌನವಾದ ಮತ್ತೇನು ಹೇಳೋದಕ್ಕೆ ಮಾತೆ ಬರ್ಲಿಲ್ಲ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ