ಸ್ಟೇಟಸ್ ಕತೆಗಳು (ಭಾಗ ೧೩೮) - ಹೆಜ್ಜೆಗಳು

ಸ್ಟೇಟಸ್ ಕತೆಗಳು (ಭಾಗ ೧೩೮) - ಹೆಜ್ಜೆಗಳು

ಕಾಯುವಿಕೆಯ ಬೆವರ ಹನಿಗಳು ಮೈ ಮೇಲೆ ಹರಿದು ನೆಲವ ಸೇರಿ ಇಂಗಿ ಒಣಗಿಹೋಗಿದೆ. ಆದರೆ ಅವಳಲ್ಲಿ ಚೈತನ್ಯ ಬತ್ತುತ್ತಿಲ್ಲ. ಹಸಿರಿನ ನಡುವೆ ಬೆಳೆದವಳು, ಬಡಾವಣೆಗಳ ಒಳಗೆ ನಡೆದಿದ್ದಾಳೆ. ಪ್ರತಿಭೆಯೊಂದೇ ಮಾನದಂಡವೆಂದು ಅರಿತು ಕದ ಬಡಿದಿದ್ದಾಳೆ, ಅಭಿನಯಿಸಿದ್ದಾಳೆ. "ಪರಿಶ್ರಮಕ್ಕೆ ಫಲವಿದೆ, ಕಾಯುವಿಕೆಗೆ  ಕೊನೆಯಿದೆ" ಅನ್ನೋ ಮಾತುಗಳು ಬರಿಯ ವಾಕ್ಯಗಳಾಗಿ ದಿನವೂ ಹಾದುಹೋಗುತ್ತಿದೆ. ಹೊಗಳಿ ಅಟ್ಟಕ್ಕೇರಿಸಿ ಆಗಮಿಸಲು ಕರೆ ನೀಡಿದವರು ಮೌನ ತಾಳಿದ್ದಾರೆ . ದಾರಿಗಳು ಅಡ್ಡಾದಿಡ್ಡಿಯಾಗಿ ವಿಳಾಸ ತಪ್ಪಿ ಸುಸ್ತಾಗಿ ಕೂತಾಗ ಮತ್ತೆ ಮನೆಯ ಅಂಗಳ  ನೆನಪಾಗುತ್ತದೆ. ಗೆಲುವು ಪಡೆಯದೆ ಹಿಂತಿರುಗಲ್ಲ ಅನ್ನೋ ಛಲ ಅವಳನ್ನು ಇನ್ನೂ ಬದುಕಿಸಿದೆ. " ಕಲೆಗೆ ಬೆಲೆ ಯಾಕೆ ಕಟ್ತೀಯಾ, ನಾವು ಅವಕಾಶ ನೀಡುತ್ತೇವೆ" ಅನ್ನೋರು ಹೊಟ್ಟೆಯೊಳಗಿನ ಹಸಿವನ್ನು ಯೋಚಿಸಬೇಕಲ್ಲವೇ ? ಅವಳಿಗೆ ಊರು ಕಾಯುತ್ತಿದೆ. ನಗರದೊಳಗೆ ಕಳೆದು ಹೋಗುತ್ತಾಳೋ, ಮತ್ತೆ ಗೆಲುವಿನ ನಗುವಿನೊಂದಿಗೆ ಮರಳಿ ಅವಳೊಂದಿಗೆ ಬೆಳೆದ ಗಿಡಗಳಿಗೆ ನೀರುಣಿಸುತ್ತಾಳೋ ಗೊತ್ತಿಲ್ಲ. ಮನೆಯವರು  ಅವಳ ದಾರಿ ಕಾಯುತ್ತಿದ್ದಾರೆ, ದಾರಿ ಅವಳ ಹೆಜ್ಜೆಯ ಸದ್ದಿಗೆ ಕಿವಿಗೊಟ್ಟು ಮೌನವಾಗಿದೆ .ಅವಳ ಹೆಜ್ಜೆಗಳು ಇನ್ನೂ ನಗರದ ರಸ್ತೆಯಲ್ಲಿ ಅತ್ತಿಂದಿತ್ತ ಇತ್ತಿಂದಿತ್ತ ಚಲಿಸುತ್ತಲೇ ಇದೆ....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ