ಸ್ಟೇಟಸ್ ಕತೆಗಳು (ಭಾಗ ೧೩೯೩) - ಪ್ರಶ್ನೋತ್ತರ

ಈಗಾಗಲೇ ಉತ್ತರ ಪತ್ರಿಕೆಯನ್ನು ತಯಾರು ಮಾಡಿಟ್ಟುಕೊಂಡಿದ್ದರು. ಪ್ರಶ್ನೆಗಳು ಸಿದ್ಧವಾಗಿದ್ದವು. ಪರೀಕ್ಷೆ ಆಗೋದು ಒಂದೇ ಬಾಕಿ, ಆದರೆ ಈ ಉತ್ತರ ಪತ್ರಿಕೆಗಳನ್ನ ಸಿದ್ಧ ಮಾಡಿದವರಿಗೆ, ಈಗಾಗಲೇ ಸಿದ್ದವಾಗಿರುವ ಉತ್ತರವೇ ದೊರಕಬೇಕು ಅನ್ನೋದು ಅವರ ವಾದ. ಆದರೆ ಪರೀಕ್ಷೆಯನ್ನು ನಡೆಸುವವರು ಕ್ರಮಬದ್ಧವಾಗಿ ಪ್ರಶ್ನೆಯನ್ನು ಹಿಡಿದುಕೊಂಡು ಅದಕ್ಕೆ ಸಮಂಜಸವಾದ ಉತ್ತರವನ್ನು ಹುಡುಕಲು ಆರಂಭಿಸುತ್ತಾರೆ. ಹಾಗೆ ಹುಡುಕುತ್ತಾ ಹುಡುಕುತ್ತಾ ಕೊನೆಗೆ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ನೀಡುತ್ತಾರೆ. ಆದರೆ ಈ ಮೊದಲೇ ಉತ್ತರವನ್ನ ತಯಾರಿಸಿ ಇಟ್ಟುಕೊಂಡವರಿಗೆ ಅದು ತುಂಬಾ ನೋವನ್ನುಂಟು ಮಾಡುತ್ತದೆ. ಯಾಕೆಂದರೆ ತಾವು ಬಯಸಿದ ಉತ್ತರವೇ ಆ ಪ್ರಶ್ನೆಗೆ ಸಿಗಬೇಕು ಅನ್ನೋದು ಅವರ ವಾದ. ಎಷ್ಟೇ ಸಲ ಪರೀಕ್ಷೆ ಮಾಡಿದರು ಕೂಡ ಪ್ರಶ್ನೆಗೆ ತಕ್ಕ ಉತ್ತರವನ್ನು ಅವರು ಬಯಸುವುದಿಲ್ಲ. ಅವರಿಗೆ ಬೇಕಾಗಿರುವುದು ಅವರು ಸಿದ್ಧಪಡಿಸಿಕೊಂಡ ಉತ್ತರವೇ ಆ ಪ್ರಶ್ನೆಗೆ ಉತ್ತರವಾಗಬೇಕು. ಈ ಪ್ರಶ್ನೆ ಉತ್ತರಗಳು ನಿಮಗೆ ಅರ್ಥವಾಗಲಿಲ್ಲವೇ? ಹಾಗಾದರೆ ಪ್ರಸ್ತುತ ಕಾಲದ ಸುತ್ತ ನಡೆಯುವ, ಅಲ್ಲಿಯ ಘಟನೆಗಳಿಗೆ ಇಲ್ಲಿಯ ಪ್ರಶ್ನೋತ್ತರಗಳು ಉತ್ತರವಾಗುತ್ತವೆ. ಈ ಒಂದು ಪತ್ರ ಕೈಗೆ ತಲುಪಿದೆ. ಘಟನೆ ಯಾವುದು ಅಂತ ಯೋಚಿಸೋಕೆ ಆರಂಭಿಸಿದೆ ಯಾವುದೇ ಸೂಚನೆ ದೊರೆಯಲಿಲ್ಲ, ನಿಮಗೆ…?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ