ಸ್ಟೇಟಸ್ ಕತೆಗಳು (ಭಾಗ ೧೩೯೫) - ಸಾಧನೆ

ಸ್ಟೇಟಸ್ ಕತೆಗಳು (ಭಾಗ ೧೩೯೫) - ಸಾಧನೆ

ಮನೆಯ ಪಕ್ಕದಲ್ಲಿ ಜಗತ್ತು ಕಾಣದೆ ಇರುವ ಜೀವವನ್ನು ಎಸೆದು ಹೋಗಿಬಿಟ್ಟಿದ್ದರು. ಅವುಗಳನ್ನು ಬದುಕಿಸಿಕೊಳ್ಳಲೇ ಬೇಕಾಗಿದೆ. ಎಷ್ಟೇ ಪ್ರಯತ್ನ ಪಟ್ಟರು ನಮ್ಮ ಕೈಯಲ್ಲಿ ಆಗುವ ಕೆಲಸವನ್ನಷ್ಟೇ ಮಾಡಬಹುದು. ಸುತ್ತಮುತ್ತ ಅವುಗಳ ರಕ್ಷಣೆಯಿಂದ ಹೆಸರು ಪಡೆದವರು ಹಲವರಿದ್ದಾರೆ, ಅದಕ್ಕೊಂದು ನೆಲೆ ಸಿಗಬಹುದು ಅನ್ನೋ ಕಾರಣಕ್ಕೆ ಸಂಪರ್ಕಿಸಿದೆ. ಸಂಪರ್ಕಕ್ಕೆ ಎಷ್ಟೇ ಪ್ರಯತ್ನ ಪಟ್ರು ಕೆಲವರು ಪ್ರಶ್ನೆಗೆ ಉತ್ತರ ನೀಡಲಿಲ್ಲ ಇನ್ನೂ ಕೆಲವರು ದೊರಕಲೆ ಇಲ್ಲ. ಹಾಗೆ ಹತ್ತಿರದ ಪರಿಚಯದವರು ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಿಕೊಂಡಿದ್ದರು. ಒಂದಷ್ಟು ಪ್ರಶಸ್ತಿಗಳು ಅವರನ್ನ ಈ ಕಾರಣಕ್ಕೆ ಹುಡುಕಿ ಬಂದಿದ್ದವು. ಅವರಲ್ಲಿ ಈ ಪುಟ್ಟ ಜೀವಗಳನ್ನು ಉಳಿಸುವ ದಾರಿಯನ್ನ ಕೇಳಿದೆ. ಅವರ ಉತ್ತರ ತುಂಬಾ ಅದ್ಭುತವಾಗಿತ್ತು. ಈ ಪ್ರಾಣಿಗಳನ್ನು ಉಳಿಸುವುದರ ಬಗ್ಗೆ ಎಲ್ಲಾ ಕಡೆ ಭಾಷಣ ಮಾಡುವುದಕ್ಕೆ ನಾನು ತೆರಳುತ್ತೇನೆ. ಆದರೆ ಅವುಗಳನ್ನು ನನ್ನ ಮನೆಯಲ್ಲಿ ಸಾಕಿಕೊಳ್ಳುವ ಯೋಚನೆಯೂ ಇಲ್ಲ ಅಭ್ಯಾಸವು ಇಲ್ಲ. ನನ್ನದು ಜನರೊಳಗೆ ಮಾಹಿತಿಯನ್ನು ಬಿತ್ತರಿಸುವ ಕೆಲಸ ಮಾತ್ರ. ಪ್ರಶಸ್ತಿ ಅವರ ಮನೆಯ ಗೋಡೆಯಲ್ಲಿ ಗಟ್ಟಿಯಾಗಿ ನೇತು ಬಿದ್ದಿದೆ. ಪುಟ್ಟ ಬೆಕ್ಕಿನ ಮರಿಗಳು ನಮ್ಮ ಮನೆಯ ಕೊಠಡಿಯೊಂದರಲ್ಲಿ ಹಸಿವಿನಿಂದ ಅಳುತ್ತಿವೆ. ಇನ್ನೊಂದಷ್ಟು ಹೆಚ್ಚು ಪ್ರಶಸ್ತಿಗಳು ಅವರನ್ನು ಹುಡುಕಿ ಬರುವ ನಿರೀಕ್ಷೆ ಇದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ