ಸ್ಟೇಟಸ್ ಕತೆಗಳು (ಭಾಗ ೧೩೯೭) - ದಾರ

ಸ್ಟೇಟಸ್ ಕತೆಗಳು (ಭಾಗ ೧೩೯೭) - ದಾರ

ಅಪ್ಪ ನೇರವಾಗಿ ಕೈ ಹಿಡಿದುಕೊಂಡು ಊರಿನ‌ ದೇವಸ್ಥಾನದ ರಥದ ಬಳಿ‌ ಕರೆದುಕೊಂಡು ಬಂದಿದ್ದರು. ಹಾಗೆ ಬರುವುದಕ್ಕೆ ಕಾರಣವೂ ಇತ್ತು. ಒಂದಿಷ್ಟು ದಿನಗಳಿಂದ ಅಪ್ಪ ಹೇಳಿದ ಕೆಲಸವನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನಾನು ತಯಾರಿರ್ಲಿಲ್ಲ. ಅದಲ್ಲದೆ ನನ್ನೊಬ್ಬನಿಂದ ಇದು ಸಾಧ್ಯವಾಗುವುದಿಲ್ಲ ಅನ್ನೋದನ್ನ ಹಲವು ಬಾರಿ ಹೇಳಿದ್ದೆ ಕೂಡ. ದೇವಸ್ಥಾನದ ಮುಂದಿನ ರಥವನ್ನು ತೋರಿಸಿ ಇದು ನಿನಗೆ ಹೇಳುವ ಬದುಕಿನ ಪಾಠ ಎಂತದು ಗೊತ್ತಾ? ಇಷ್ಟು ದೊಡ್ಡ ರಥವನ್ನ ಎಳೆಯಬೇಕೆಂದರೆ ಇದಕ್ಕೆ ಹಗ್ಗವನ್ನು ಕಟ್ಟಲೇಬೇಕು. ರಥ ತನ್ನಿಂದ ತಾನಾಗಿ ಚಲಿಸುವುದಿಲ್ಲ. ಒಂದಷ್ಟು ಜನ ಭಕ್ತರ ಕೈ ಸೇರಿಸಿ ಎಳೆದಾಗ ಹಗ್ಗದ ಬಿಗುವಿನ ಎಳೆತಕ್ಕೆ ರಥ ಮುಂದೆ ಚಲಿಸುತ್ತದೆ. ಒಂದೊಂದು ಸಣ್ಣ ಸಣ್ಣ ದಾರಗಳು ಸೇರಿ ದಪ್ಪದ ಹಗ್ಗವಾಗಿದೆ. ಪ್ರತಿಯೊಂದು ಸಣ್ಣದಾರದ ಶ್ರಮವೂ ಇದೆ. ರಥವನ್ನು ಎಳೆಯುವುದಕ್ಕೆ ನನ್ನಿಂದ ಸಾಧ್ಯವಾಗುವುದಿಲ್ಲವೆಂದು ಸಣ್ಣ ದಾರವು ಬದಿಗೆ ಸರಿದರೆ ರಥ ಮುಂದೆ ಚಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ನೀನು ಅರ್ಥ ಮಾಡಿಕೊಳ್ಳಬೇಕಿರೋದು ಇಷ್ಟನ್ನೇ. ನಿನ್ನ ಬದುಕಿನ ರಥ ಎಳೆಯಬೇಕೆಂದರೆ ನಿನ್ನ ಪರಿಶ್ರಮವೆಂಬ ಸಣ್ಣ ಸಣ್ಣ ದಾರಗಳೆಲ್ಲವೂ ಸೇರಿದಾಗ ಬದುಕಿನ ರಥ ಸುಲಭವಾಗಿ ಮುಂದೆ ಚಲಿಸುತ್ತದೆ. ಇದನ್ನು ನೋಡಿಯೂ ನಿನಗೆ ಅರ್ಥವಾಗದಿದ್ದರೆ ನಾನೇನು ಹೇಳಲು ಸಾಧ್ಯವಿಲ್ಲ, ಅಂತಂದು ಅಪ್ಪ ಹೊರಟುಬಿಟ್ಟರು. ಬದುಕಿನ ಕಥೆ ತುಂಬಾ ಚೆನ್ನಾಗಿತ್ತು ಅರ್ಥ ಮಾಡಿಕೊಳ್ಳುವುದು ನನಗೆ ಬಿಟ್ಟದ್ದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ