ಸ್ಟೇಟಸ್ ಕತೆಗಳು (ಭಾಗ ೧೩೯೯) - ತಲೆನೋವು

ಸ್ಟೇಟಸ್ ಕತೆಗಳು (ಭಾಗ ೧೩೯೯) - ತಲೆನೋವು

ಒಂದು ವಾರದಿಂದ ಸಿಂಹಕ್ಕೆ ತಲೆನೋವು ಅದು ಅಂತಿಂಥ ತಲೆನೋವಲ್ಲ. ಅಷ್ಟು ಸುಲಭದಲ್ಲಿ ಕಡಿಮೆಯಾಗುವಂತದ್ದು ಅಲ್ಲ. ಎಷ್ಟೇ ಪ್ರಯತ್ನ ಪಟ್ಟರು ಕೂಡ ತಲೆನೋವು ವಾಸಿಯಾಗುವ ಹಾಗೆ ಕಾಣುತ್ತಿಲ್ಲ. ಈ ತಲೆನೋವು ಯಾವುದೋ ರೋಗದ ಕಾರಣಕ್ಕೆ ಅಂಟಿಕೊಂಡದ್ದಲ್ಲ. ತನ್ನ ಸುತ್ತಮುತ್ತ ಇರುವವರು ತನ್ನ ಬಗ್ಗೆ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವ ಯೋಚನೆಯಿಂದಲೇ ಹುಟ್ಟಿಕೊಂಡದ್ದು. ಇನ್ನು ಕೆಲವೇ ದಿನಗಳಲ್ಲಿ ಸಿಂಹ ಈ ರಾಜ್ಯಭಾರವನ್ನ ವಹಿಸಿಕೊಳ್ಳಲು ಯಾವುದೇ ಯುದ್ಧವನ್ನು ಮಾಡಿಲ್ಲ. ಯಾವುದೇ ಚುನಾವಣೆಯನ್ನು ಎದುರಿಸಿಲ್ಲ. ಆದರೆ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಆ ಪದವಿ ಅದಕ್ಕೆ ದೊರಕಿದೆ. ಆದರೆ ತನ್ನ ಕಾಡಿನಲ್ಲಿ ವಾಸಿಸುವ ಉಳಿದ ಎಲ್ಲಾ ಪ್ರಾಣಿಗಳು ತನ್ನ ಈ ಪದವಿಯ ಬಗ್ಗೆ ಏನು ಮಾತನಾಡಿಕೊಳ್ಳಬಹುದು ನನಗೆ ಸಿಕ್ಕ ಅಧಿಕಾರವನ್ನು ಪ್ರಶ್ನಿಸಬಹುದು ನನ್ನ ಸಾಮರ್ಥ್ಯದ ಬಗ್ಗೆ ಕೀಳು ಮಾತುಗಳನ್ನ ಆಡಬಹುದೇ? ನನ್ನ ಕೆಲಸ ಕಾರ್ಯಗಳಿಗೆ ಸಹಕಾರ ದೊರೆಯಬಹುದೇ, ಹೀಗೆ ಹಲವು ಪ್ರಶ್ನೆಗಳನ್ನ ಪಟ್ಟಿ ಮಾಡಿಕೊಂಡು ಅದನ್ನೇ ಯೋಚಿಸುತ್ತಾ ತಲೆನೋವನ್ನು ಹೆಚ್ಚಿಸಿಕೊಂಡಿದೆ. ತನ್ನ ಮಗನ ಅವಸ್ಥೆಯನ್ನು ಕಂಡ ಅಪ್ಪ ಸಿಂಹ ಮಗನ ಬಳಿ ಕುಳಿತು ನೋಡು ಮಗು ನಿನ್ನ ಬದುಕಿನ ನಿರ್ಧಾರ ಬದುಕಿನ ದಾರಿಗಳು ಅದು ನಿನ್ನದು. ಆ ಕಾರಣಕ್ಕೆ ಉಳಿದ ಪ್ರಾಣಿಗಳು ಏನು ಮಾತನಾಡುತ್ತಿದ್ದಾವೆ ಅನ್ನೋದನ್ನ ನೀನು ಯೋಚಿಸುವುದು ಸರಿಯಲ್ಲ. ಅಲ್ಲದೆ ಅಗತ್ಯವೂ ಇಲ್ಲ ನೀನು ಸಿಂಹ ನಿನ್ನ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡರೆ ಸಾಕು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡ. ಅಪ್ಪನ ಧೈರ್ಯದ ಮಾತು ಮನಸ್ಸೋಳಗೆ ಸಾಗಿ ತಲೆ ನೋವನ್ನು ಮಾಯ ಮಾಡಿತು ಸಿಂಹ ನೆಮ್ಮದಿಯಿಂದ ಉಸಿರಾಡಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ