ಸ್ಟೇಟಸ್ ಕತೆಗಳು (ಭಾಗ ೧೩೯) - ರಮೇಶಣ್ಣ

ಸ್ಟೇಟಸ್ ಕತೆಗಳು (ಭಾಗ ೧೩೯) - ರಮೇಶಣ್ಣ

ಈ ದೊಡ್ಡ ಗಾಡಿಯ ಚಕ್ರ ತಿರುಗಿಸಿ ಹಾದಿಯ ಮೇಲೆ ಸುರಕ್ಷಿತವಾಗಿ ಸಾಗಿ ಗುರಿ ತಲುಪಲು ಸ್ಟೇರಿಂಗ್ ಹಿಡಿದು ಕೂತಿರುವವರು ನಮ್ಮ ರಮೇಶಣ್ಣ. 50 ದಶಕಗಳ ಜೈತ್ರಯಾತ್ರೆ. ಬಸ್ಸಿನ ಸ್ಟೇರಿಂಗ್ ಹಿಡಿದು, ಗೇರು ಹಾಕುತ್ತಾ,  ಕ್ಲಚ್ಚುಗಳನ್ನು ಒತ್ತುತ್ತ, ಎಕ್ಸಿಲೇಟರ್ ಅದುಮುತ್ತಾರೆ. ವಯಸ್ಸಿನ ಹಂಗನ್ನು ಬಿಳಿಯ ಕೂದಲು ಮಿಂಚುತ್ತಾ, ಹಾರಾಡುತ್ತಾ ಸೂಚಿಸುತ್ತದೆ. 

ಮುಂಜಾನೆ 5:00 ಕ್ಕೆ ಹೊರಟು ಸಂಜೆ ಎಂಟಕ್ಕೆ ನಿಲ್ಲುತ್ತಿದ್ದ ಬಸ್ಸು ಕೆಲವು ಸಮಯದಿಂದ ಮುಂಜಾನೆ ಏಳರಿಂದ ಆರಂಭವಾಗಿ ಸಂಜೆ ಆರಕ್ಕೆ ಕೊನೆಗೊಳ್ಳುತ್ತದೆ. ಕಾರಣ ಸ್ವಲ್ಪ ಕಣ್ಣು ಮಂಜಾಗಿದೆ ಅಂತಾರೆ. ಒಂದು ದಿನವೂ ಅಪಘಾತ ನಡೆದೇ ಇಲ್ಲ. ಮಾಲೀಕರ ನೆಚ್ಚಿನ ಚಾಲಕ ಅನ್ನಿಸಿಕೊಂಡಿದ್ದಾರೆ. "ಸುಮ್ಮನೆ ಮನೇಲಿದ್ರೆ ಏನು ಮಕ್ಕಳು ನೋಡಿಕೊಳ್ಳಲ್ವಾ? ಸಾರ್ " "ಮಕ್ಕಳಿಗೆ ಅವರ ಜವಾಬ್ದಾರಿಗಳು ಜಾಸ್ತಿ ಇರುತ್ತೆ ,ಅವರ ಮಕ್ಕಳ ಶಿಕ್ಷಣ, ಬಟ್ಟೆ-ಬರೆ, ಹೆಂಡತಿಯ ಜೀವನ ಇಷ್ಟಕ್ಕೆ ಆಗುವಾಗಲೇ ಹೈರಾಣಾಗುತ್ತಾರೆ, ನಾನೊಬ್ಬ ಮುದುಕ ಅವರಿಗೆ ಯಾಕೆ ಹೊರೆಯಾಗುವುದು, ನನ್ನ ಅನ್ನ ನಾನೇ ನೋಡ್ಕೋತೇನೆ, ಅವರ ಖರ್ಚಿಗೂ ನೀಡ್ತೇನೆ, ಮೊಮ್ಮಕ್ಕಳ ಸಂತಸದಲ್ಲಿ ನನ್ನದು ಒಂದು ಪಾಲಿದೆ ಅಲ್ವಾ ?".

"ನನ್ನ ಬದುಕು ಕಟ್ಟಿದ ಈ ತೇರಿನ ಮುಂದೆ ನನ್ನ ಉಸಿರು ನಿಲ್ಲಬೇಕು ಅನ್ನೋದು ನನ್ನದೊಂದು ಆಸೆ " "ನಾನು ಚಾಲಕನಾಗಿರುವುದರಿಂದಲೇ ನನ್ನ ಪರಿಚಯದ ಕುಟುಂಬ ತುಂಬಾ ದೊಡ್ಡದಿದೆ ಇವರನ್ನು ಬಿಟ್ಟು ನನ್ನ ಸ್ಟೇರಿಂಗ್ ಅನ್ನ ಬದಿಗಿಟ್ಟು ಮನೆಯ ಮೂಲೆಯಲ್ಲಿ ಕುರ್ಚಿಯಲ್ಲಿ ಕೂರೋಕೆ ಮನಸ್ಸಿಲ್ಲ ಸಾರ್ " "ಆಯ್ತೇನೋ 10.18 ಕ್ಕೆ ಉದ್ಯಾವರ ಗೇಟಲ್ಲಿ ಇರಬೇಕು. ಬಂಡಿ ಸಾಗುತ್ತಿದೆ....

-ಧೀರಜ್ ಬೆಳ್ಳಾರೆ

ಸಾಂದರ್ಭಿಕ ಚಿತ್ರ: ಇಂಟರ್ನೆಟ್ ತಾಣ