ಸ್ಟೇಟಸ್ ಕತೆಗಳು (ಭಾಗ ೧೪೦೦) - ಸತ್ಯ

ಸತ್ಯ ಸುಮ್ಮನಾಗಿ ಬಿಟ್ಟಿದೆ. ಅದಕ್ಕೆ ತುಂಬಾ ಚೆನ್ನಾಗಿ ಗೊತ್ತಿದೆ. ತನ್ನನ್ನು ಯಾರೆಲ್ಲ ಬಳಸಿಕೊಳ್ಳುತ್ತಿದ್ದಾರೊ ಅವರು ಯಾರಿಗೂ ನಾನು ಸರಿಯಾಗಿ ಅರ್ಥ ಆಗಿಲ್ಲ. ಅವರವರು ಅವರವರಿಗೆ ಬೇಕಾದ ಹಾಗೆ ಅವರಿಗೆ ಉಪಯೋಗ ಆಗುವ ಹಾಗೆ ನನ್ನನ್ನ ಅರ್ಧದಷ್ಟೇ ಬಳಸಿಕೊಂಡು ಬದುಕುತ್ತಿದ್ದಾರೆ. ನನ್ನ ಜೊತೆ ಸುಳ್ಳನ್ನು ಸೇರಿಸಿಕೊಂಡು ಅದು ನಾನೇ ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ಅದು ನಾನಲ್ಲ ನನಗೆ ನನ್ನದೇ ಆದ ಒಂದು ಸ್ವರೂಪವಿದೆ. ನೀವು ಅದನ್ನ ಅರ್ಥ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ ನಾನು ಯಾರ ಬಾಯಿಯಿಂದಲೂ ಒಂದೇ ರೂಪದಲ್ಲಿ ಹೊರ ಬರುವುದಿಲ್ಲ. ಕ್ಷಣ ಕ್ಷಣಕ್ಕೂ ಒಂದೊಂದು ರೂಪವನ್ನು ಪಡೆದುಕೊಳ್ಳುತ್ತೇನೆ, ಆದರೆ ನನ್ನನ್ನು ಬಳಸಿಕೊಳ್ಳುವವರೆಲ್ಲರಿಗೂ ಕೂಡ ಅವರ ಬಾಯಿಯಿಂದ ಹೊರಟಿರುವುದು ನಾನೇ ಅಂದುಕೊಳ್ಳುತ್ತಾರೆ. ನನ್ನನ್ನ ಅಷ್ಟು ಸುಲಭವಾಗಿ ಪತ್ತೆ ಹಚ್ಚುವುದಕ್ಕೂ ಬಳಸುವುದಕ್ಕೂ ಸಾಧ್ಯವಿಲ್ಲ .ಹಾಗಾಗಿ ನನ್ನ ಬೇಡಿಕೆ ಇಷ್ಟೆ ನಿಮಗೆ ನಾನು ಸರಿಯಾಗಿ ಪೂರ್ತಿಯಾಗಿ ಅರ್ಥವಾಗಿದ್ದರೆ ಅದನ್ನು ಮುಂದಿನವರಿಗೆ ದಾಟಿಸಿಬಿಡಿ .ನನಗೆ ವಿವಿಧ ರೂಪಗಳನ್ನು ಸೇರಿಸಿ ನನ್ನನ್ನು ಮಲಿನ ಗೊಳಿಸಿ ನೀವು ಹೇಳೋದೇ ನನ್ನ ರೂಪವೆಂದು ದಾಟಿಸಲು ಪ್ರಯತ್ನಿಸಬೇಡಿ. ನನಗೆ ನನ್ನದೇ ಆದ ಸ್ವರೂಪವಿದೆ.
ಸತ್ಯ ಇಲ್ಲಿ ಗಂಟಲು ಹರಿದು ಕಿರುಚಿದರೂ ಸತ್ಯದ ಮಾತನ್ನು ಕೇಳುವ ವ್ಯವಧಾನ ಯಾರಿಗೂ ಇಲ್ಲ. ಎಲ್ಲರಿಗೂ ಅವರವರ ಕಿವಿಯೊಳಗೆ ಕಣ್ಣೊಳಗೆ ಬಾಯೊಳಗೆ ತುಂಬಿರುವುದೇ ಸತ್ಯದ ರೂಪ ಅಂದುಕೊಂಡು ಬಿಟ್ಟಿದ್ದಾರೆ... ಸತ್ಯವೂ ಸುಮ್ಮನಾಗಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ