ಸ್ಟೇಟಸ್ ಕತೆಗಳು (ಭಾಗ ೧೪೦೧) - ಅವರಿಬ್ಬರೂ

ಸ್ಟೇಟಸ್ ಕತೆಗಳು (ಭಾಗ ೧೪೦೧) - ಅವರಿಬ್ಬರೂ

ಇಬ್ಬರೂ ಕೆಲಸ ಮಾಡುವ ಸ್ಥಳವೊಂದೇ ಅವರ ತಿಂಗಳಂತ್ಯಕ್ಕಾಗುವಾಗ ಅವರಿಬ್ಬರ ಬ್ಯಾಂಕ್ ಅಕೌಂಟ್ ಗೆ ಬಂದು ಬೀಳುವ ಹಣವು ಒಂದೇ ರೀತಿಯಾಗಿರೋದು, ಆದರೆ ಇಬ್ಬರ ಬದುಕಿನ ರೀತಿಗಳು ತುಂಬಾ ಬದಲಾವಣೆಯನ್ನು ಕಂಡುಕೊಂಡಿವೆ. ಹೋಟೆಲ್ ನಿಂದ ಊಟ ಮಾಡಿ ಹೊರಗೆ ಬರುವಾಗ ಒಬ್ಬಳ ತಟ್ಟೆಯಲ್ಲಿ ತಿಂದಷ್ಟೇ ಉಳಿದಿರುತ್ತದೆ ಇನ್ನೊಬ್ಬಳು ಮಧ್ಯಾಹ್ನದ ಊಟವನ್ನೇ ಬಿಟ್ಟರೆ ಸ್ವಲ್ಪ ದುಡ್ಡು ಉಳಿತಾಯವಾಗುತ್ತದೆ ಅನ್ನುವ ಯೋಚನೆ, ಒಬ್ಬಳಿಗೆ ತಿಂಗಳ ಸಂಬಳದಲ್ಲಿ ಸ್ವಂತಕ್ಕೆ ಖರೀದಿಸುವ ಪಟ್ಟಿ ತಯಾರಾದರೆ ಇನ್ನೊಬ್ಬಳು ಮನೆಗೆ ಬೇಕಾದ ವಸ್ತುಗಳ ಪಟ್ಟಿ ತಯಾರಿಸಿ ಉಳಿದದ್ದನ್ನು ಅಮ್ಮನಿಗೆ ಕಳುಹಿಸುವ ಯೋಚನೆಯಲ್ಲಿ ಇರುತ್ತಾಳೆ. ಒಬ್ಬಳಿಗೆ ಊರೂರು ತಿರುಗುವ ಆಸೆಯಾದರೆ ಇನ್ನೊಬ್ಬಳು ಆಸೆಗಳೆಲ್ಲವನ್ನು ಒಂದಷ್ಟು ಸಮಯಕ್ಕೆ ಮುಂದೂಡಿ ಬಿಟ್ಟಿದ್ದಾಳೆ ದಿನಕ್ಕೊಂದು ಚಂದ ಚಂದದ ಬಟ್ಟೆ ಧರಿಸುವ ಇರಾದೆ ಒಬ್ಬಳಿಗೆ ಆದರೆ ಇರುವ ಏಳು ಬಟ್ಟೆಗಳೇ ವಾರಕ್ಕೊಂದರಂತೆ ಬದಲಾಯಿಸಿ ಇನ್ನಿಬ್ಬಳು ದಿನದೊಡುತ್ತಾಳೆ. ಒಂದೇ ಒಂದೇ ಮನೆಯ ಪರಿಸ್ಥಿತಿಗಳು ಬೇರೆ ತಲೆಯಲ್ಲಿರುವ ಆಲೋಚನೆಗಳು ಬೇರೆ ಜವಾಬ್ದಾರಿಗಳು ಬೇರೆ, ಇಬ್ಬರೂ ಜೊತೆಯಾಗಿ ಬದುಕ್ತಾ ಇದ್ದಾರೆ. ಸಾಗುವ ದಾರಿ ಒಂದೇ ಇದ್ದರು ದಾರಿಯನ್ನ ಅನುಭವಿಸುವ ವಿಧಾನ ಬೇರೆ ಬೇರೆ ಅಷ್ಟೇ....ಒಟ್ಟಿಗಿದ್ದರೂ ಬದುಕಿನ ರುಚಿಗಳು ವಿಭಿನ್ನ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ