ಸ್ಟೇಟಸ್ ಕತೆಗಳು (ಭಾಗ ೧೪೦) - ಅವಳು

ಮುಳ್ಳು ಮುಂದೆ ಚಲಿಸಿಯಾಗಿದೆ .ಆ ಕ್ಷಣವ ನಿಲ್ಲಿಸಿ ಸಂಭ್ರಮಿಸೋಕ್ಕಾಗಲಿ, ಯಾತನೆ ಪಡೋಕ್ಕಾಗಲಿ ಸಮಯವೇ ಸಿಗಲಿಲ್ಲವೇನೋ ಅನಿಸುತ್ತಿದೆ. ಸಾವಿರ ಕೈಗಳಿಂದ ಅಕ್ಷತೆಗಳು ತಲೆ ಮೇಲೆ ಬಿದ್ದಾಗ ನಾನು ತಾಳಿಕಟ್ಟಿದ ಹುಡುಗಿ ಪಕ್ಕದಲ್ಲಿ ಇದ್ದಳು. ಅವಳ ನಾಚಿದ ಮುಖ, ಕಿರು ಮಂದಹಾಸ, ಕಣ್ಣಂಚಿನ ನೀರು ಸಾರ್ಥಕ ಪಡೆದಿತ್ತು. ಬದುಕಿನ ರೋಮಾಂಚನದ ಕ್ಷಣವದು. ಅಮ್ಮ ಕೊನೆಯ ದಿನದಲ್ಲಿ ನನ್ನವಳ ಕೈಯನ್ನು ನನ್ನ ಮೇಲಿಟ್ಟು" ಜಾಗೃತೆ ಮಗಾ" ಅಂದಳು. ಅಮ್ಮನ ವಿದಾಯ ನೋವು ಕೊಟ್ಟಿತ್ತು. ನನ್ನ ಮುದ್ದಿನ ಮಡದಿಯ ಅಕ್ಕರೆಯಲ್ಲಿ ಮತ್ತೆ ಬದುಕಿಗೆ ಮರಳಿದ್ದೆ. ನಾನವಳಿಗೆ ಕಾಡುತ್ತಿದ್ದೆ, ಸಣ್ಣಪುಟ್ಟ ವಿಚಾರಗಳಿಗೆ ರೇಗಿದ್ದೆ, ಉಪ್ಪು ಹುಳಿಗೂ ಜಗಳವಾಡಿದ್ದೆ. ಆ ದಿನ ಅಳಿಸಲಾಗದ ಗಾಯವೊಂದನ್ನು ಕೆತ್ತಿ ಹೊರಟುಹೋಗಿದ್ದಳು. ನನ್ನರಸಿ ಬಂದ ನನ್ನರಸಿ ನನ್ನ ತೊರೆದಿದ್ದಳು. ಅಮ್ಮನ ನಂತರ ನನ್ನವಳ ಮೌಲ್ಯದ ಅರಿವಾಗಿತ್ತು. ಬದುಕಿನ ಬೆಳಕಿನ ಕಿಂಡಿ ಮುಚ್ಚಿದೆ. " ಕಣ್ಣೀರು ಒರೆಸಲು ಎರಡು ಕೈ ಸಾಲದು ಎಂಬುದರ ಅರಿವಾಗಿದೆ ". ಅವಳು ನನ್ನ ಅರ್ಥಮಾಡಿಕೊಂಡು ನಾನು ಇಷ್ಟಪಟ್ಟಿದ್ದನ್ನು ಕೇಳುವ ಮೊದಲೇ ನೀಡುತ್ತಿದ್ದಳು. ನನಗೆ ಅರ್ಥವಾಗಲಿಲ್ಲ . ಈಗ ನಾಲಿಗೆಗೆ ಏನು ರುಚಿಸುತ್ತಿಲ್ಲ. ನನ್ನವಳು ನನ್ನೊಂದಿಗಿರಬೇಕು. ರುಚಿಸಿದ ಬದುಕನ್ನ ಅಂತ್ಯದವರೆಗೆ ತಳ್ಳುತ್ತೇನೆ, ಜೊತೆಗಾರರು ಇಲ್ಲದಿರೋ ಬದುಕೇ ಕ್ರೂರ. ನನ್ನನ್ನ ಒಯ್ದು ಬಿಡೋ ನನ್ನವಳ ಬಳಿಗೆ......
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ