ಸ್ಟೇಟಸ್ ಕತೆಗಳು (ಭಾಗ ೧೪೧೦) - ದೇವಾ

ಅಮ್ಮ, ದೇವರೇ ಯಾಕೆ ಈ ಪೇಟೆ ನಡುವೆ ಬಂದುಬಿಟ್ಟಿದ್ದಾನೆ? ಅವರಿಗೆ ಈ ಗದ್ದಲದ ನಡುವೆ ಇರುವುದಕ್ಕಿಂತ ಶಾಂತವಾದ ಕಾಡಿನ ನಡುವೆ ನೆಮ್ಮದಿಯಾಗಿರಬಹುದು, ಊರಿನ ಮಧ್ಯದಲ್ಲಿದ್ದ ಪುಟ್ಟ ದೇವರ ಗುಡಿಯನ್ನು ನೋಡಿ ಮಗು ಅಮ್ಮನಲ್ಲಿ ಕೇಳಿತು. ದೇವಸ್ಥಾನದ ಸುತ್ತ ಒಂದಷ್ಟು ಮರ ಗಿಡಗಳನ್ನು ಬಿಟ್ಟರೆ ಉಳಿದ ಕಡೆ ಎಲ್ಲವೂ ಕಾಂಕ್ರೀಟ್ರೀಕರಣವಾಗಿದೆ. ಮಗೂ ದೇವರು ಊರಿನ ನಡುವೆ ಬಂದದ್ದಲ್ಲ ದೇವರ ಬಳಿಗೆ ಊರು ಹತ್ತಿರವಾಗ್ತಾ ಹೋದದ್ದು, ಕಾಡಿನ ನಡುವೆ ಭಗವಂತ ನೆಮ್ಮದಿಯಾಗಿದ್ದ. ಎಲ್ಲರನ್ನ ಹರಸ್ತಾಯಿದ್ದ. ಮನುಷ್ಯನ ತನ್ನ ಅಂಗಳವನ್ನು ವಿಸ್ತರಿಸ್ತಾ ಕಾಡುಗಳನ್ನು ಕಡಿಯುತ್ತಾ ದೇವರ ಬಳಿಗೆ ತಲುಪಿ ಬಿಟ್ಟ. ದೇವರ ಭಯದಿಂದ ಒಂದಷ್ಟು ಮರಗಳು ಉಳಿದಿವೆ ಅಷ್ಟೆ. ಇನ್ನೊಂದು ಸ್ವಲ್ಪ ಸಮಯ ಈ ಸ್ಥಳವನ್ನು ಇಲ್ಲಿಂದ ಖಾಲಿ ಮಾಡಿ ತನ್ನ ವಾಣಿಜ್ಯ ಕೆಲಸಕ್ಕೆ ಬಳಸಿಕೊಳ್ಳುತ್ತಾನೆ. ಆಮೇಲೆ ದೇವರು ಈ ಊರನ್ನೇ ಬಿಟ್ಟು ಹೋಗಲೇಬೇಕು. ಈ ಸ್ವಾರ್ಥಿಗಳ ನಡುವೆ ನಿಂತ ಭಗವಂತನಿಗೆ ತನ್ನ ಮಕ್ಕಳ ಬಗ್ಗೆ ಬೇಸರವೇರಿಸಿದೆ. ಆದರೂ ತನ್ನ ಮಕ್ಕಳೆಂದು ಹರಸುತ್ತಾನೆ. ಮಗನಿಗೆ ಅರ್ಥವಾಯಿತು ಅನ್ಸುತ್ತೆ ಭಗವಂತನ ಮುಂದೆ ದೇವರೇ, ನಿನಗೆ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಇಲ್ಲವಾದರೆ ನಮ್ಮ ಮನಸ್ಸಿನೊಳಗಿರುವ ಯೋಚನೆಗಳನ್ನು ಬದಲಿಸು ಸುಂದರವಾದ ಪರಿಸರದ ನಡುವೆ ನೀನು ನಿಲ್ಲುವ ಹಾಗೆ ಮಾಡುವೆವು...ಕೈ ಮುಗಿದು ಅಮ್ಮನ ಜೊತೆಗೆ ಹೊರಟುಬಿಟ್ಟ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ