ಸ್ಟೇಟಸ್ ಕತೆಗಳು (ಭಾಗ ೧೪೧೭) - ಜಯರಾಮ

ಸ್ಟೇಟಸ್ ಕತೆಗಳು (ಭಾಗ ೧೪೧೭) - ಜಯರಾಮ

ದೇಹಕ್ಕೆ ವಯಸ್ಸಾಗಿದೆ ಒಂದಷ್ಟು ಕನಸುಗಳಿದ್ದದ್ದು ನಿಜ ಆ ಕನಸುಗಳೆಲ್ಲ ನನಸಾಗುವ ಕಡೆಗೆ ಸಾಗಲಿಲ್ಲ ಬದುಕಿನಲ್ಲಿ ಜವಾಬ್ದಾರಿ ಹೆಚ್ಚಾದ ಕಾರಣ ದೈನಂದಿನ ದುಡಿಮೆಯ ಕಡೆಗೆ ಮನಸ್ಸು ಮಾಡಿ ದುಡಿದು ದೇಹವನ್ನು ದಂಡಿಸಿದವರು ಜಯರಾಮರು. ಈಗ ಮಕ್ಕಳು ಶಿಕ್ಷಣವನ್ನ ಪಡೆದು ತಮ್ಮ ಕಾಲ ಮೇಲೆ ನಿಂತಿದ್ದಾರೆ. ರಸ್ತೆ ಬದಿಯಲ್ಲಿ ಚಲಿಸುವಾಗ ಕೆಲವರು ಓಡಿಸುವ ಚಂದದ ಬೈಕುಗಳನ್ನ ಕಂಡಾಗ ಮನಸ್ಸಿನ ಒಳಗೆ ಆಸೆ ಹುಟ್ಟುತ್ತದೆ, ಕಾರುಗಳ ಸ್ಟೇರಿಂಗ್ ತಿರುಗಿಸುವಾಗ ನಮ್ಮ ಮನೆಯಲ್ಲಿ ಒಂದು ಕಾರ್ ಇರಬೇಕಿತ್ತು ಅಂತ ಅನ್ನಿಸ್ತದೆ, ಯಾರೋ ಯಾವುದೋ ಕಾರ್ಯಕ್ರಮದ ಸಂಘಟಕರಾದಾಗ ಮುಖ್ಯಸ್ಥರಾದಾಗ ತಾವು ತಮ್ಮ ಹೆಸರು ಅಲ್ಲಿ ಇರಬೇಕಿತ್ತು ಎಂದು ಮನಸ್ಸು ನುಡಿಯುತ್ತದೆ. ಆದರೆ ಇದೆಲ್ಲವನ್ನು ಸಾಧ್ಯವಾಗಿಸಬೇಕಾಗಿದ್ದು ಪರಿಸ್ಥಿತಿಗಳು ಆದರೆ ಹಿಂದೆ ಅದು ಯಾವುದನ್ನು ಮಾಡುವುದಕ್ಕಾಗ್ಲಿಲ್ಲ, ಈಗ ಮಾಡುವುದಕ್ಕೆ ದೇಹ ಕೇಳುತ್ತಿಲ್ಲ. ಜವಾಬ್ದಾರಿ ಹೆಗಲ ಮೇಲೆ ಗಟ್ಟಿಯಾಗಿ ಕುಳಿತ ಮೇಲೆ ಒಂದೇ ದಾರಿಯಲ್ಲಿ ಸುಮ್ಮನೆ ನಡೆದು ಬಿಡಬೇಕು. ಹಾಗೆ ಭಗವಂತ ಕೊಟ್ಟ ಈ ಬದುಕನ್ನ ಜೀವಿಸ್ತೇನೆ ಅಂತಂದುಕೊಂಡು ನಕ್ಕು ಮತ್ತೆ ದಾರಿಯಲ್ಲಿ ಮುನ್ನಡೆಯುತ್ತಾರೆ. ಜಯರಾಮರ ಬದುಕಿನಲ್ಲಿ ಕನಸಿಗೆ ಜಯ ಸಿಗದಿದ್ದರೂ ಅವರ ಬದುಕಿನ ಆದರ್ಶಕ್ಕೆ ಜಯ ಸಿಕ್ಕಿದೆ ಅನ್ನೋದೇ ಅವರಿಗೆ ನೆಮ್ಮದಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ