ಸ್ಟೇಟಸ್ ಕತೆಗಳು (ಭಾಗ ೧೪೧೮) - ಬೇರು

ಸ್ಟೇಟಸ್ ಕತೆಗಳು (ಭಾಗ ೧೪೧೮) - ಬೇರು

ಮನೆಯ ಹಿಂದೆ ಕಿಟಕಿಯ ಕೆಳಗೆ ಸಣ್ಣದೊಂದು ಅಂತರವಿದೆ. ಆ ಇಟ್ಟಿಗೆಯ ಮೇಲೆ ಬಿದ್ದ ಸಣ್ಣ ಮಣ್ಣಿನ ತುಂಡಿನ ಒಳಗಿನಿಂದ ಗಿಡ ಒಂದು ಚಿಗುರಿ ಬದುಕುವುದಕ್ಕೆ ಆಸೆ ಪಡ್ತಾ ಇದೆ. ಅದನ್ನು ನೋಡಿದ ನನಗೆ ಒಂದು ಕ್ಷಣ ನಗು ಬಂತು. ಈ ಗಿಡಕ್ಕೆ ಇನ್ನೂ ಬೆಳೆದು ಮರವಾಗುವ ಆಸೆ ಇದ್ದರೆ ಈ ಮಣ್ಣಿನ ಪುಟ್ಟ ತುಂಡಿನಿಂದ ಸಾಧ್ಯವಾಗುವುದಿಲ್ಲ. ಮುಂದೆ ಬೇರಿಳಿಸುವುದಕ್ಕೂ ಅವಕಾಶವೇ ಇಲ್ಲ. ಬೆಳೆಯುವ ದೊಡ್ಡ ಆಸೆ ಇದ್ದರೆ ಅದು ನೆಲವನ್ನೇ ಆಶ್ರಯಿಸಿಕೊಳ್ಳಬೇಕಿತ್ತು. ಸಿಕ್ಕ ಅವಕಾಶ ಅಂತ ಬಳಸಿಕೊಳ್ಳುವುದು ಒಳ್ಳೆಯದೇ ಆದರೆ ಅಲ್ಲಿ ಬದುಕು ದೊಡ್ಡದಾಗುವುದಿಲ್ಲ, ಗಿಡ ಅಲ್ಲೇ ಉಳಿದುಬಿಡುತ್ತದೆ. ಕೊನೆಗೆ ಸತ್ತೇ ಹೋಗ್ತದೆ. ಈ ಗಿಡಕ್ಕೆ ಅಷ್ಟು ಗೊತ್ತಾಗೋದಿಲ್ಲ ಎಂದು ನಾನು ಮಾತಾಡ್ತಾ ಇರುವಾಗ ಹಿಂದಿನಿಂದ ಬಂದ ಅಪ್ಪ ಹೇಳಿದರು, ನೋಡು ನೀನು ಸರಿಯಾಗಿ ಹೇಳಿದ್ದಿ, ನಿನಗೂ ಹಾಗೆ, ಎಲ್ಲಿ ನಿನಗೆ ಅವಕಾಶ ಸಿಗುತ್ತೆ ಅಂತ ನುಗ್ಗಿ ಬಿಡಬೇಡ. ಸಿಕ್ಕ ಅವಕಾಶದಿಂದ ನೀನು ತುಂಬಾ ಎತ್ತರಕ್ಕೆ ಬೆಳೆಯಬೇಕು, ನಿನ್ನ ಭವಿಷ್ಯದ ಬೇರುಗಳನ್ನು ಕೆಳಗಿಳಿಸಿ ಗಟ್ಟಿಯಾಗಿ ನಿಲ್ಲುವಂತಹ ಯೋಚನೆ ಮಾಡಿಕೊಂಡು ಅಲ್ಲೇ ಬೇರಿಳಿಸಿ ಬದುಕು ಕಟ್ಟಿಕೋ. ನಿನ್ನ ಬದುಕಿನ ಪಾಠ ನೀನೇ ಅರ್ಥ ಮಾಡಿಕೋಬೇಕು. ಅಪ್ಪನ ಮಾತು ಯೋಚನೆಗೆ ಸೂಕ್ತ ಅಂತ ಅನಿಸಿತು

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ