ಸ್ಟೇಟಸ್ ಕತೆಗಳು (ಭಾಗ ೧೪೧೯) - ಬಿದಿರು

ಬಿದಿರು ತುಂಬಾ ನೋವಿನಿಂದ ಅಳುತ್ತಿತ್ತು. ಹತ್ತಿರ ನಿಂತು ಬಿದಿರ ಯಜಮಾನ ಬಿದಿರಿನ ಬಳಿ ಕೇಳಿದ ಯಾಕೆ ಮಾರಾಯ ಅಳುತ್ತಾ ಇದ್ದೀಯಾ, ಇಷ್ಟು ನೋವಾಗುವಂಥದ್ದು ಏನಾಗಿದೆ? ಅದಕ್ಕೆ ಬಿದರು " ನೋಡಿ ನಾನು ಸಂಗೀತಗಾರನ ಕೈಯಲ್ಲಿ ಕೊಳಲಾಗಬೇಕು ಅನ್ನುವ ಆಸೆಯಿಂದ ಜೀವಿಸಿದ್ದು. ನಾನೀಗ ಹೆಚ್ಚು ಬೆಳೆಯುವುದಕ್ಕೆ ಪ್ರಾರಂಭವಾಗಿದ್ದೇನೆ ಇನ್ನು ಕೊಳಲಾಗುವ ಅವಕಾಶ ನನ್ನಿಂದ ಸಾಧ್ಯವಾಗುವುದಿಲ್ಲ. ಕೊಳಲಾಗದೆ ಉಳಿದುಬಿಟ್ಟರೆ ನನ್ನ ಜೀವನ ನಶ್ವರವಾಗುತ್ತಲ್ಲ ಅನ್ನೋದು ಅದರ ನೋವು .ಅದಕ್ಕೆ ಯಜಮಾನ ಹೇಳಿದ ನೋಡು ನೀನು ಕೊಳಲಾಗುವ ಅವಕಾಶವನ್ನು ಕಳೆದುಕೊಂಡೆ ಅಂತಂದ್ರೆ ಅದಕ್ಕಿಂತ ಅದ್ಭುತವಾದ ಅವಕಾಶ ನಿನ್ನ ಕಣ್ಣ ಮುಂದೆ ಇದೆ, ನೀನು ಹಲವಾರು ಜನರಿಗೆ ಆಶ್ರಯ ನೀಡುವ ಮನೆಯಾಗಬಹುದು, ಕೊನೆಗೊಂದು ಸಲ ಅವರನ್ನ ಮಸಣಕ್ಕೆ ನೆಮ್ಮದಿಯಿಂದ ಒಯ್ಯುವ ಚಟ್ಟಾಗಬಹುದು, ಕೈಗೆ ಊರುಗೋಲಾಗಬಹುದು,ಬೀಳುವ ಗಿಡಕ್ಕೆ ಆಧಾರವಾಗಬಹುದು, ಸಂಭ್ರಮದ ಮದುವೆ ಮನೆಯ ಚಪ್ಪರವಾಗಬಹುದು, ತಪ್ಪಿದ್ದನ್ನ ತಿದ್ದಿ ಹೇಳುವ ಕೋಲಾಗಬಹುದು, ಮನೆಯನ್ನ ರಕ್ಷಣೆ ಮಾಡುವ ಬೇಲಿಯಾಗಬಹುದು, ಎತ್ತರದಿಂದ ಕೊಯ್ಯುವ ಕೋಲಾಗಬಹುದು, ಹೀಗೆ ನಿನ್ನಲ್ಲಿ ಅವಕಾಶಗಳು ಹಲವು ಇದೆ. ಎಲ್ಲೋ ಒಂದು ಕಡೆ ಉಳಿದುಬಿಟ್ಟಿದ್ದೇನೆ ಅನ್ನುವ ನೋವು ಬೇಡ ಹೊಸ ಅವಕಾಶಗಳು ನಿನ್ನನ್ನು ಹುಡುಕಿ ಬರುತ್ತವೆ ಒಂದಷ್ಟು ಸಮಯ ಕಾಯಬೇಕಷ್ಟೆ. ಬಿದಿರು ಅಳುವುದನ್ನು ನಿಲ್ಲಿಸಿ ಹೊಸ ಅವಕಾಶಕ್ಕೆ ಎದುರು ನೋಡುವುದಕ್ಕೆ ಆರಂಭ ಮಾಡಿತು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ