ಸ್ಟೇಟಸ್ ಕತೆಗಳು (ಭಾಗ ೧೪೧) - ಅಭಿವೃದ್ಧಿ
ಜರೂರತ್ತು ಏನು ಅಂತ ಗೊತ್ತಾಗಲಿಲ್ಲ. ರಸ್ತೆ ರಿಪೇರಿ ಸಾಗ್ತಾ ಇತ್ತು. ಹಾ ರಿಪೇರಿಯಲ್ಲ ಪೂರ್ತಿಯಾಗಿ ಹೊಸದಾಗಿ ತಯಾರಾಗುತ್ತಿತ್ತು. ಸಂಜೆಯಾಗುವಾಗ ಅಲ್ಲಿನ ಕರೆಂಟ್ ಕಂಬಗಳು ಶಾಸಕರಿಗೆ ಸ್ವಾಗತ ಎನ್ನೋ ಬ್ಯಾನರ್ ಅನ್ನು ಹೊತ್ತಿದ್ದವು. ಶಾಸಕರು ಮಾಯವಾದ ಕೂಡಲೇ ನೀರಿನ ಪೈಪ್ ದುರಸ್ತಿ ಕಾರ್ಯಕ್ಕೆ ಗುಂಡಿ ಆಗೆಯಲಾರಂಭಿಸಿದರು .
ಕೆಲಸದ ಉತ್ಕೃಷ್ಟತೆಗೆ ಮುಚ್ಚಿದ ಪೈಪು ಗುಂಡಿಯ ಪಕ್ಕ ಇನ್ನೊಂದು ದೂರವಾಣಿಯ ಕರೆಯ ಸಂವಹನದ ವಾಹಕವನ್ನು ಹುಗಿಯಲು ಗುಂಡಿ ತೊಡುತ್ತಿದ್ದರು. ಇಷ್ಟಾಗುವಾಗಲೇ ರಸ್ತೆ ತನ್ನ ಹಳೆಯ ವಿನಾಶದ ಸ್ಥಿತಿಗೆ ತಲುಪಿತ್ತು. ಅಭಿವೃದ್ಧಿಯ ನೂತನ ನಿಶಾನೆ ಹಾರುತ್ತಿತ್ತು. ತಾಳಮೇಳವಿಲ್ಲದ ಇಲಾಖೆಗಳು, ಮಾತುಕತೆಯಾಡದ ಅಧಿಕಾರಿಗಳು, ಒಪ್ಪಿದ್ದನ್ನು ಚಾಚೂತಪ್ಪದೆ ಮಾಡುವ ನೌಕರರು, ಧೂಳು ತಿಂದು ಆರೋಗ್ಯ ಕ್ಷೀಣಿಸಿದ ಜನರು. ಕಾರು ಬೈಕು ಕಟ್ಟಡ ಹೆಚ್ಚಾದುದಕ್ಕೆ ಅಭಿವೃದ್ಧಿ ಎಂಬ ನಾಮಕರಣವಾಯಿತು. ಊರಿನ ಶಾಲೆ, ಬಡವನ ಹಸಿವು, ಖಾಲಿ ಜೇಬು, ಮಂದಗತಿಯ ಆರೋಗ್ಯ, ಬರಡು ಕೆರೆ, ಒಣಗಿದ ಮರ ಇವು ಹೆಸರಿಲ್ಲದೆ ಉಳಿದುಬಿಟ್ಟವು. ಹೀಗಿದ್ದಾಗಲೂ ಅಲ್ಲಿ ಮೈಕ್ ಹಿಡಿದು ಕೂಗುತ್ತಿದ್ದಾರೆ "ನಿಮ್ಮ ಏಳಿಗೆ ನಾವು ಸಿದ್ಧ "ಅಂತ. ನಾನು ಅದೇ ಹೊಂಡ ತುಂಬಿದ ರಸ್ತೆಯಲ್ಲಿ ಸಾಗುತ್ತೇನೆ.
ಮನೆಗೆ ತಲುಪಿ ಬೆನ್ನುನೋವಿಗೆ ಮದ್ದು ಹಚ್ಚುವಾಗ ಮತ್ತೊಮ್ಮೆ ಊರಿಗೆ ರಾಜಕಾರಣಿ ಬರಲಿ ಅಂತ ಯೋಚನೆ ಮಾಡುತ್ತಿದ್ದೇನೆ. ನಾನಾಗಿ ಯಾವುದೇ ಕಾರ್ಯಕ್ಕೆ ಮುಂದಡಿಯಿಟ್ಟ ಮನುಷ್ಯ ಅಲ್ಲವೇ ಅಲ್ಲ. ಯಾರಾದರೂ ಮುಂದೆ ಹೋದರೆ ಅವರ ಹಿಂದೆ ನಾಲ್ಕು ದಿನ ಇದ್ದು ಮೆಲ್ಲ ಜಾರಿಕೊಳ್ಳುವವ. ಹೇಳೋ ಅವಕಾಶ ಇದೆ ಅನ್ನೋ ಕಾರಣಕ್ಕೆ ಬೊಗಳಿದೆ.
-ಧೀರಜ್ ಬೆಳ್ಳಾರೆ
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ