ಸ್ಟೇಟಸ್ ಕತೆಗಳು (ಭಾಗ ೧೪೨೧) - ಅಪಘಾತ

ಅವನು ರಸ್ತೆಯಲ್ಲಿ ಚಲಿಸುತ್ತಿದ್ದರೆ ಅವನನ್ನ ಹುಚ್ಚ ಅಂತ ಕರೀತಾರೆ. ಅವನ ಮಾತು ಯಾರೂ ಕೇಳುವುದಿಲ್ಲ. ಆದರೆ ಅವನು ಆಗಾಗ ಮನಸ್ಸಿಗೆ ಅರ್ಥವಾಗುವ ಹಾಗೆ ಮಾತಾಡ್ತಾನೆ. ಇತ್ತೀಚಿಗೆ ನನ್ನ ಬೈಕು ಹಾಳಾದ ಕಾರಣ ರಸ್ತೆ ಬದಿಯಲ್ಲಿ ಮುಂದೇನು ಮಾಡುವುದು ಅಂತ ಗೊತ್ತಿಲ್ಲದೆ ನಿಂತಿದ್ದೆ. ಅಲ್ಲೇ ಒಂದು ಬೋರ್ಡಿನ ಕೆಳಗೆ ಕುಳಿತ ಆತ ಆಗಲೇ ಮಾತನ್ನು ಶುರು ಹಚ್ಚಿಕೊಂಡಿದ್ದ. ಯಾರಿಗೂ ಬುದ್ಧಿ ಇಲ್ಲ, ಯಾರಿಗೆ ಏನು ಹೇಳಿದರೂ ಅರ್ಥ ಆಗಲ್ಲ. ಇವರು ಮಾಡೋದಿಲ್ಲ ಸರಿ ಅಂತ ಅಂದುಕೊಂಡಿದ್ದಾರೆ. ಇದೇ ರಸ್ತೆಯಲ್ಲಿ ಅಪಘಾತವಾಗಿ ನಾನು ನನ್ನ ಮನೆಯವರನ್ನ ಕಳೆದುಕೊಂಡೆ. ಅದಕ್ಕಿಂತ ಮೊದಲು ಇಲ್ಲಿ ಒಂದಷ್ಟು ಅಪಘಾತಗಳಾಗಿವೆ. ಆದರೆ ಈ ಸರ್ಕಾರದವರು ಇಲ್ಲೊಂದು ದೊಡ್ಡ ಫಲಕವನ್ನ ನೇತು ಹಾಕಿ ಅಪಘಾತ ವಲಯ ಅಂತ ಬರೆದು ಬಿಟ್ಟಿದ್ದಾರೆ .ಆ ಬೋರ್ಡು ಬರೆದ ಮೇಲೂ ಪ್ರತಿ ಸಲವೂ ಅಲ್ಲಿ ಅಪಘಾತಗಳು ನಡೀತಾನೆ ಇದೆ. ಅಪಘಾತ ಯಾಕಾಗುತ್ತದೆ ರಸ್ತೆಯನ್ನು ಸರಿಪಡಿಸಬಹುದಲ್ಲ ಹೇಳಿದರೆ ನನ್ನನ್ನು ಹುಚ್ಚ ಅಂತಾರೆ. ಕೇಳದೆ ಇರೋರು ಹುಚ್ಚರು ತಾನೆ. ಈಗ ಹೇಳಿ ಹುಚ್ಚರು ಯಾರು ನಾನು ನೀವೋ? ಅವನ ಮಾತು ಚಪ್ಪಲಿಯನ್ನ ಬಟ್ಟೆಯಲ್ಲಿ ಕಟ್ಟಿ ನನಗೆ ಹೊಡೆದಂತೆ ಇತ್ತು. ಪುಣ್ಯಕ್ಕೆ ಗ್ಯಾರೇಜ್ ಹತ್ತಿರದಲ್ಲಿದ್ದ ಕಾರಣ ಗಾಡಿ ರಿಪೇರಿಯಾಯಿತು. ಅವನು ಹೇಳಿದ ಮಾತಿನಿಂದ ಮನಸ್ಸು ರಿಪೇರಿಯಾಗುವುದು ಇನ್ನೂ ಉಳಿದಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ