ಸ್ಟೇಟಸ್ ಕತೆಗಳು (ಭಾಗ ೧೪೨೨) - ನೀರು

ನಿನಗೆ ಅಂದಿನಿಂದಲೂ ನೀರನ್ನು ನೋಡಿ ಕಲಿ ಅನ್ನೋದನ್ನ ಹೇಳಿದೆ. ನೀನು ಆ ಮಾತನ್ನ ಯಾವತ್ತೂ ಗಾಢವಾಗಿ ತೆಗೆದುಕೊಳ್ಳಲೇ ಇಲ್ಲ. ಇವತ್ತು ಮತ್ತೆ ಹೇಳ್ತಾ ಇದ್ದೇನೆ. ನೀರಿನಿಂದ ಬದುಕನ್ನ ಕಲಿಯುವುದಕ್ಕೆ ತುಂಬಾ ಅವಕಾಶಗಳಿದೆ. ನೀನು ನೀರಿನಂಥೆ ಆಗಬೇಕು. ಯಾವ ಆಕಾರ ಸಿಕ್ಕಿದ್ರು ಆ ಆಕಾರಕ್ಕೆ ನೀನು ಒಗ್ಗಿಕೊಳ್ಳಬೇಕು. ನೀನು ಪ್ರತಿಯೊಬ್ಬರಿಗೂ ಅಗತ್ಯವಾಗಬೇಕು .ನೀರಿನ ಹಾಗೆ ಗಟ್ಟಿಯಾಗಬೇಕು ಮೃದುವಾಗಬೇಕು ಆವಿಯೂ ಆಗಬೇಕು. ನೀರು ತಾನು ಕುದಿಯುವಾಗ ಅದರೊಳಗೆ ಬಿದ್ದ ಕೆಲವು ವಸ್ತುಗಳನ್ನು ಗಟ್ಟಿಗೊಳಿಸುತ್ತದೆ ಕೆಲವನ್ನು ಮೃದುವಾಗಿಸುತ್ತದೆ ನೀನು ಕೂಡ ನಿನ್ನ ಸಂಪರ್ಕಕ್ಕೆ ಬಂದವರು ಜೀವನದಲ್ಲಿ ಕಠಿಣ ನಿರ್ಧಾರಗಳಿಂದ ಗಟ್ಟಿಯಾಗಬಹುದು ಒಳ್ಳೆಯ ಮಾತಿನಿಂದ ಮನಸ್ಸು ಮೃದುವಾಗಬಹುದು ನೀನು ನೀನಾಗಿ ಬಿಟ್ಟರೆ ಸಾಕು ಹಾಗಾಗಿ ಮತ್ತೆ ಹೇಳ್ತಾ ಇದ್ದೇನೆ. ನೀರಿನಿಂದ ಕಲಿಯುವ ಅವಕಾಶಗಳು ಇದೆ ಗಂಟಲೊಳಗೆ ಇಳಿಸುವಾಗ ಮನಸ್ಸಿನೊಳಗೂ ಆಲೋಚನೆಗಳನ್ನು ಇಳಿಸಿ ಬಿಡು. ಅವತ್ತು ಸಿಕ್ಕಿದ ನಮ್ಮ ಪ್ರೈಮರಿ ಶಾಲೆಯ ಮೇಷ್ಟ್ರು ಯಾಕೆ ಈ ಮಾತನ್ನು ಹೇಳಿದರು ಅರ್ಥ ಆಗ್ಲಿಲ್ಲ.ಅವರಿಗೆ ನೋವಾಗಬಾರದೆಂದು ಅವರ ಮಾತನ್ನು ಕೇಳಿಸಿಕೊಂಡೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ