ಸ್ಟೇಟಸ್ ಕತೆಗಳು (ಭಾಗ ೧೪೨೩) - ಮುದ್ದು

ಮನೆಯೊಂದು ನಂದನವಾಗಿದೆ. ಅವಳು ಬರುವವರೆಗೂ ಆ ಮನೆ ನಾಲ್ಕು ಗೋಡೆಗಳ ಮೇಲೆ ಹಂಚೊಂದನ್ನ ಇಟ್ಟ ಪುಟ್ಟ ಗೂಡಾಗಿತ್ತು. ಅಲ್ಲಿ ನೆನಪುಗಳು ಇರಲಿಲ್ಲ, ಬಾಂಧವ್ಯವಿರಲಿಲ್ಲ, ಕನಸುಗಳಿರಲಿಲ್ಲ, ಬದುಕಿರಲಿಲ್ಲ, ಅವಳು ಕಾಲಿಟ್ಟ ಕ್ಷಣದಿಂದ ಮನೆ ಹಾಗಿದ್ದರೂ ಮನೆ ಒಳಗಿನ ಭಾವನೆಗಳು ಬದಲಾದವು, ಕನಸುಗಳು ಹುಟ್ಟಿಕೊಂಡವು, ಸಂಬಂಧಗಳು ಗಾಢವಾದವು, ತನ್ನದೇ ಮನೆಯಲ್ಲಿ ಒಬ್ಬಳಾಗಿದ್ದವಳು, ತನ್ನದಲ್ಲದ ಮನೆಯನ್ನ ತನ್ನದಾಗಿಸಿಕೊಂಡು ಇದೀಗ ಬೆಳಗುತಿದ್ದಾಳೆ. ಮನೆಯ ಬೆಳಗಿಸುತ್ತಿದ್ದಾಳೆ. ಅವಳು ಹೆಜ್ಜೆ ಇಡದೆ ಇರುತ್ತಿದ್ದರೆ ಈ ಮನೆ ಗೋಡೆಯೊಳಗಿನ ಗೂಡಾಗಿತ್ತು, ಅವಳು ಕಾಲಿಟ್ಟಿದ್ದರಿಂದ ಎಲ್ಲವೂ ಬದಲಾಗಿದೆ. ಬದುಕಾಗಿದೆ ಬೆಳಕಾಗಿದೆ.. ಅವಳಿಗೆ ವಂದನೆ ತಿಳಿಸಬೇಕು, ಕೈಮುಗಿದು ಹಾರೈಸಬೇಕೋ ಜೊತೆಗಿದ್ದ ಸಂಗಾತಿಯೆನಬೇಕೊ ಇನ್ನೂ ಹೆಚ್ಚು ಪ್ರೀತಿ ತೋರಿಸಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಅವಳಿಂದ ನನ್ನ ಬದುಕು ಬೆಳಕಾಗಿದೆ. ಹೀಗೆಂದು ತನ್ನ ಪಕ್ಕದಲ್ಲಿ ಕಣ್ಣು ಮುಚ್ಚಿ ಮಲಗಿರುವ ಮುದ್ದಿನ ಮಡದಿಯನ್ನ ತದೇಕ ಚಿತ್ತದಿಂದ ನೋಡುತ್ತಾ ಅವನ ಮನಸ್ಸಿನ ಒಳಗೆ ಮೂಡಿದ ಪ್ರಶ್ನೆಗಳನ್ನು ಹಾಗೆ ಕೇಳುತ್ತಲಿದ್ದ... ಮನಸೊಳಗೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ