ಸ್ಟೇಟಸ್ ಕತೆಗಳು (ಭಾಗ ೧೪೨೪) - ಮೌನದವಳು

ಅವಳಿಗೆ ಮಾತನಾಡುವುದಕ್ಕೆ ಇಷ್ಟವಿಲ್ಲ ಅಂತಲ್ಲ, ಆದರೆ ಮಾತನಾಡಲು ಹೊರಟರೆ ಅನುಭವಿಸಿದ ಒಂದಷ್ಟು ಸತ್ಯಗಳನ್ನು ಹೊರಗಿಡಬೇಕಾಗುತ್ತದೆ, ಅದನ್ನ ಕೇಳುವ ಕಿವಿಗಳು ಕಡಿಮೆ ಇದ್ದರೂ ಕೇಳಿದ್ದಕ್ಕೆ ಇನ್ನೊಂದಷ್ಟು ಹೆಚ್ಚು ಸೇರಿಸಿ ಹಲವು ಮನಸ್ಸುಗಳನ್ನ ನಾಶ ಮಾಡಲು ಕಾಯುತ್ತಿವೆ. ಹೀಗಿರುವಾಗ ಮಾತನಾಡದೆ ಸುಮ್ಮನಿರುವುದೇ ಒಳಿತು ಅಂತಂದುಕೊಂಡಿದ್ದಾಳೆ. ಅವಳ ಮನೆಯ ಸುತ್ತಮುತ್ತ ಹಲವು ಕಿವಿಗಳು ಕಾಯುತ್ತಿವೆ. ಮನೆಯೊಳಗಿನ ಗೋಡೆಗಳಿಗೆ ಕಿವಿಗಳು ಹೊಟ್ಟಿಕೊಂಡಿವೆ. ಮಾತನಾಡದ ಕಾರಣ ಪ್ರತಿ ಉಸಿರನ್ನು ಆಲಿಸುವ ಕಿವಿಗಳು ಹೆಚ್ಚಾಗಿದೆ. ಇತ್ತೀಚೆಗೆ ಅವಳ ಮನೆಯ ಗೋಡೆಗಳಲ್ಲಿ ಒಂದಷ್ಟು ಕಿಂಡಿಗಳು ಒಡಮೂಡಿದ ಕಾರಣ ಸುದ್ದಿಗಳು ಗಾಳಿಯ ರೂಪದಿ ಊರ ಮಧ್ಯೆ ಪಸರಿಸಿದೆ. ಪೇಟೆಯ ಬೀದಿಯಲ್ಲಿ ಓಡಾಡಿದೆ ಊರು ದಾಟಿ ಪರ ಊರನ್ನು ತಲುಪಿದೆ. ಆಕೆ ಮಾತನಾಡದಿದ್ದರೂ ಆಕೆಯ ಬಗ್ಗೆ ಎಲ್ಲರೂ ಮಾತನಾಡುವಂತಾಗಿದೆ. ಈಗ ಹಾಗೆ ತನ್ನ ಸುತ್ತಮುತ್ತ ಇದ್ದವರನ್ನು ದೂರಸರಿಸಿ ಮಾತೇ ಬಾರದವರ ಕಿವಿಯೇ ಕೆಳದವರ ನಡುವೆ ಬದುಕುವುದಕ್ಕೆ ಸ್ಥಳಾವಕಾಶ ಹುಡುಕುತ್ತಿದ್ದಾಳೆ. ಅವಳ ಪಯಣ ಮುಂದುವರೆದಿದೆ. ಇಂದಿನವರೆಗೂ ಆಕೆಗೆ ಅವರ್ಯಾರು ದೊರೆಯಲೆ ಇಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ