ಸ್ಟೇಟಸ್ ಕತೆಗಳು (ಭಾಗ ೧೪೨೯) - ಭಾವೈಕ್ಯ

ಇಸ್ಮಾಯಿಲ್ ಅಣ್ಣ ತಮ್ಮ ನಾಲ್ಕು ಮೊಮ್ಮಕ್ಕಳನ್ನು ಕರೆದುಕೊಂಡು ಆ ಗಣಪತಿ ಮಂಟಪದ ಹತ್ತಿರ ಬಂದಿದ್ರು. ಬಂದವರೇ ಮಕ್ಕಳ ಬಳಿ ಕೈಮುಗಿಯುವುದಕ್ಕೆ ಹೇಳಿದರು ಮಕ್ಕಳು ಮುಖ ಮುಖ ನೋಡ್ತಿದ್ದಾಗ ಇಸ್ಮಾಯಿಲ್ ಅಣ್ಣ ಎಚ್ಚರಿಕೆಯ ಮಾತನಾಡಿದರು, ಮಕ್ಕಳೇ ದೇವರು ಎಲ್ಲರೂ ಒಬ್ಬರೇ ಕೈಮುಗಿದು ಪ್ರಾರ್ಥಿಸಬೇಕು. ಖಂಡಿತಾ ಆತ ಒಳ್ಳೇದು ಮಾಡುತ್ತಾನೆ. ಮಕ್ಕಳಿಗೆ ಇದು ಅಷ್ಟು ಸಮಂಜಸ ಅನ್ನಿಸಲಿಲ್ಲ. ಮಾತು ಮುಂದುವರಿಸಿದರು, ನಾನು ಮೊದಲು ಈ ಊರಿಗೆ ಕಾಲಿಟ್ಟಾಗ ತಿನ್ನುವುದಕ್ಕೂ ಗತಿಯಿಲ್ಲದ ಪರಿಸ್ಥಿತಿ ನಮ್ಮದು ಆಗ ಸುತ್ತ ಎಲ್ಲ ದೇವಸ್ಥಾನಗಳ ಅನ್ನ ಸಂತರ್ಪಣೆಗೆ ತೆರಳುತ್ತಾ ಇದ್ದೆ. ರಥೋತ್ಸವ, ಗಣೇಶ ಚತುರ್ಥಿ, ಕೋಲ ಅನ್ನ ಸಿಗುವ ಪ್ರತಿ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದೆ. ಕೆಲವು ಕಡೆ ಪ್ರಸಾದ ಸಿಕ್ತಾ ಇತ್ತು. ಅದನ್ನೇ ತಿಂದ ಕಾರಣಕ್ಕೆ ಇವತ್ತು ಜೀವ ಗಟ್ಟಿ ಆಗಿದೆ. ಮಕ್ಕಳನ್ನ ಬೆಳೆದು ನಿಲ್ಲಿಸಿದ್ದೇನೆ . ಈಗ ಗೋಡೆಯ ಮೇಲೊಂದು ಹಂಚು ಬಂದು ಮನೆ ನೆಮ್ಮದಿಯಲ್ಲಿದೆ. ಆದರೆ ನಾನು ನಡೆದು ಬಂದ ದಾರಿಯನ್ನ ಮರಿಬಾರದು ಅಲ್ವಾ? ಹಾಗಾಗಿ ಕೈ ಮುಗಿರಿ ಮಕ್ಕಳೇ ಖಂಡಿತ ಒಳ್ಳೇದಾಗುತ್ತೆ ಅಂತಂದು ದೇವರಲ್ಲಿ ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳಿಗೆ ಪ್ರಾರ್ಥನೆಯನ್ನು ಸಲ್ಲಿಸಿಬಿಟ್ಟರು. ಗಣಪತಿ ಸಂಭ್ರಮದಿಂದ ನಗುತ್ತಾ ಇದ್ದ ಅಲ್ಲಾನೂ ಖಂಡಿತ ಖುಷಿಯಾಗ್ತಾನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ