ಸ್ಟೇಟಸ್ ಕತೆಗಳು (ಭಾಗ ೧೪೩೩) - ಟ್ರಾಕ್ಟರ್

ಗದ್ದೆಯಲ್ಲಿ ಓಡುತ್ತಿದ್ದ ಟ್ರ್ಯಾಕ್ಟರ್ ಗದ್ದೆಯನ್ನು ಬಿಟ್ಟು ಡಾಂಬರು ರಸ್ತೆಗೇರಿದೆ. ಹಳ್ಳಿಯಲ್ಲಿ ತಿರುಗಾಡಿದ ಟ್ರಾಕ್ಟರ್ ದಿಕ್ಕು ಬದಲಿಸಿ ಪೇಟೆಯ ಕಡೆಗೆ ಪಯಣ ಬೆಳೆಸಿದೆ. ಹಸಿರಿನ ನಡುವೆ ಸಾಗುತ್ತಿದ್ದ ಟ್ರ್ಯಾಕ್ಟರ್ ನ ಗಾಲಿಗಳು ಇಂದು ಜಲ್ಲಿ ಸಿಮೆಂಟ್ ಹಳೆಯ ವಸ್ತುಗಳನ್ನು ಸಾಗಿಸುವುದಕ್ಕೆ ಪೇಟೆಯ ನಡುವೆ ಪರದಾಡುತ್ತಿದೆ. ಕೆಲವೊಂದು ಸಲ ಇಡೀ ಊರನ್ನೇ ತನ್ನ ಮೇಲೆ ಹೊತ್ತು ಪೇಟೆಯ ನಡುವಿನಲ್ಲಿ ಸಾಗುತ್ತಿದೆ. ಅಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೆ ಕಷ್ಟ ಕಂಡವರು ಇಂದು ಕುಟುಂಬ ಸಮೇತರಾಗಿ ಪೇಟೆಯ ದೊಡ್ಡ ಕಾಂಕ್ರೀಟ್ ಕಾಡಿನೊಳಕ್ಕೆ ನುಗ್ಗಿ ಬಿಟ್ಟಿದ್ದಾರೆ. ಅಲ್ಲಿ ಉಪವಾಸದಿಂದ ನೀರು ಕುಡಿಯುವುದಕ್ಕಿಂತ ಇಲ್ಲಿ ಒಂದು ಹೊತ್ತಿನ ಊಟ ಮಾಡುವ ಆಸೆ .ಅಲ್ಲಿ ಮನುಷ್ಯತ್ವವಿತ್ತು ಇಲ್ಲಿ ಹಣ ಮಾತ್ರ ಬದುಕುತ್ತದೆ .ಒಟ್ಟಿನಲ್ಲಿ ಬೇಸಾಯ ಮಾಡಬೇಕಿದ್ದ ಗದ್ದೆ ಟ್ರ್ಯಾಕ್ಟರ್ ಪೇಟೆಯ ನಡುವೆ ಓಡುವಾಗಲೇ ಹಳ್ಳಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಅನ್ನೋದು ಅರ್ಥವಾಯಿತು. ಓಡುವುದಕ್ಕೆ ಬೇಸರವಾದರೂ ಟ್ರ್ಯಾಕ್ಟರ್ ಏನೂ ಮಾಡುವ ಪರಿಸ್ಥಿತಿಯಲ್ಲಿಲ್ಲ. ತಾನು ಓಡಿದರೆ ಮಾತ್ರ ತನ್ನನ್ನು ಓಡಿಸುವವರು ಬದುಕುತ್ತಾರೆ ಅನ್ನೋದು ಅದಕ್ಕೂ ಗೊತ್ತಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ